ಅಂಬ್ಲಿಗೊಳ್ಳಕ್ಕೆ ಮೂಲ ಸೌಕರ್ಯ ಕೊರತೆ
ಕ.ಪ್ರ.ವಾರ್ತೆ, ಶಿಕಾರಿಪುರ, ಜು.13
ತಾಲೂಕಿನ ಅಂಜನಾಪುರ ಗ್ರಾಮ ಜಲಾಶಯದಿಂದಾಗಿ ಹೆಸರುವಾಸಿಯಾಗಿದ್ದು, ಇದರಿಂದಾಗಿ ಮಳೆಗಾಲದಲ್ಲಿ ನೀರಿನ ಸೌಂದರ್ಯ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರಿಗೆ ಮೂಲಸೌಕರ್ಯವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
1933 ರಲ್ಲಿ ಬ್ರಿಟೀಷ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಅವಧಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ನಕ್ಷೆಯ ಮೂಲಕ ಜಲಾಶಯದ ರೂಪ ಪಡೆದ ಹೆಗ್ಗಳಿಕೆಯ ಅಂಜನಾಪುರದ ಜಲಾಶಯ ಪಟ್ಟಣಕ್ಕೆ ಕೇವಲ 15 ಕಿ.ಮೀ ದೂರದಲ್ಲಿದೆ.
ಪ್ರವಾಸಿಗರ ಹೆಚ್ಚಳ: ಮಳೆಗಾಲದ ದಿನದಲ್ಲಿ ಜಲಾಶಯ ಭರ್ತಿಯಾಗಿ ಗೇಟ್ ಮೇಲೆ ನೀರು ಹರಿಯುವ ದೃಶ್ಯ, ಸಮೀಪದ ಫಾಲ್ಸ್ ಮತ್ತಿತರ ಸ್ಥಳವನ್ನು ಕಣ್ತುಂಬ ಸವಿಯಲು ಕಳೆದ ಕೆಲ ವರ್ಷದಿಂದ ಪ್ರವಾಸಿಗರು ದೂರದ ಸ್ಥಳದಿಂದ ಆಗಮಿಸುತ್ತಿದ್ದಾರೆ.
ನಿಧಾನವಾಗಿ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿರುವ ಜಲಾಶಯದ ಸಮೀಪ ಪ್ರವಾಸಿಗರಿಗೆ ಅವಶ್ಯಕವಾದ ನಿಲ್ದಾಣ ವ್ಯವಸ್ಥೆ, ಶೌಚಾಲಯ, ಹೋಟೆಲ್ ಸಹಿತ ಎಲ್ಲಾ ರೀತಿಯ ಸೌಲಭ್ಯಗಳಿಂದ ಬಳಲುತ್ತಿರುವುದರಿಂದ ಪ್ರವಾಸಿಗರು ಛೀಮಾರಿ ಹಾಕಿ ಜಾಗ ಖಾಲಿ ಮಾಡುತ್ತಿದ್ದಾರೆ.
ಇಚ್ಚಾಶಕ್ತಿಯ ಕೊರತೆ: ಅತ್ಯುತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಬಹುದಾದ ಎಲ್ಲಾ ಅರ್ಹತೆ ಹೊಂದಿದ್ದರೂ, ನಮ್ಮನ್ನಾಳುವ ದೊರೆಗಳ ಇಚ್ಚಾಶಕ್ತಿಯ ಕೊರತೆಯಿಂದ ಮೂಲ ಸೌಕರ್ಯದಿಂದ ವಚಿಂತವಾಗಿದೆ. ತಾಲೂಕಿನ 16 ಸಾವಿರ ಎಕರೆಗೂ ಅಧಿಕ ಜಮೀನಿಗೆ ನೀರು ಹಾಯಿಸುವ ಜಲಾಶಯವಾಗಿರುವ ಇದು, ವರ್ಷ ಪೂರ್ತಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಜಲಾಶಯದಲ್ಲಿ ಬೋಟಿಂಗ್, ಸಾಹಸ ಕ್ರೀಡೆಗಳನ್ನು ಉತ್ತೇಜಿಸುವ ವಿಫುಲ ಅವಕಾಶವಿದೆ.
ಇದರಿಂದಾಗಿ ನಿತ್ಯ ಪ್ರವಾಸಿಗರು ಬರುವ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇದೀಗ ಕೇವಲ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಅನನುಕೂಲತೆಯಿಂದಾಗಿ ಹೆಚ್ಚಿನ ರೀತಿಯಲ್ಲಿ ಸಮಯ ವ್ಯಯಿಸಲಾಗದೆ ಬಂದ ದಾರಿಗೆ ಸುಂಕ ಇಲ್ಲವೆಂಬ ರೀತಿ ವಾಪಾಸಾಗುತ್ತಿದ್ದಾರೆ.
ರು. 10ಕೋಟಿ ವೆಚ್ಚದ ಉದ್ಯಾನ: ಮುಖ್ಯಮಂತ್ರಿಯಾದ ಅವಧಿಯಲ್ಲಿ ಯಡಿಯೂರಪ್ಪ ಜಲಾಶಯ ತುಂಬಿದ ಸಂದರ್ಭದಲ್ಲಿ ಗಂಗಾ ಪೂಜೆ ನೆರವೇರಿಸಿ, ಸಂಪೂರ್ಣ ಅಂಜನಾಪುರವನ್ನು ಪ್ರವಾಸಿ ತಾಣವಾಗಿಸಿ ಜಲಾಶಯದ ಸಮೀಪದಲ್ಲಿ ಅಂದಾಜು ರು. 10 ಕೋಟಿ ವೆಚ್ಚದಲ್ಲಿ ಉದ್ಯಾನವನ, ಪ್ರವಾಸಿ ಮಂದಿರ ಮತ್ತಿತರ ಸೌಲಭ್ಯದ ಮೂಲಕ ಬೃಂದಾವನ ಮಾದರಿಯಲ್ಲಿ ಆಕರ್ಷಣೀಯ ಕೇಂದ್ರವಾಗಿಸುವ ಹೊಸ ಕನಸನ್ನು ತಾಲೂಕಿನ ಜನತೆಗೆ ಕಟ್ಟಿಕೊಟ್ಟಿದ್ದರು. ಇದೀಗ 3 ವರ್ಷದ ನಂತರ ಕೇವಲ ಶಿಲಾನ್ಯಾಸದ ಗುರುತೂ ಗೋಚರವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಮೀಪದಲ್ಲಿನ ಪುರಾತನ ಪ್ರವಾಸಿ ಮಂದಿರದ ಅಭಿವೃದ್ಧಿಗೆ ಅಂದಾಜು ರು. 50 ಲಕ್ಷ ವ್ಯಯಿಸಲಾಗಿದ್ದು, ಇಂದಿಗೂ ಕೇವಲ ಭೂತ ಬಂಗಲೆಯಾಗಿ ಅಧಿಕೃತ ಕಾವಲುಗಾರರಿಲ್ಲದೆ ಸಮಾಜ ಘಾತುಕ ಕೃತ್ಯಕ್ಕೆ ಸೂಕ್ತ ಸ್ಥಳವಾಗಿ ಪರಿವರ್ತನೆಯಾಗುತ್ತಿದೆ ಎಂದು ಗ್ರಾಮದ ರೈತ ಮೇಘರಾಜ್ ಪ್ರತಿಕ್ರಿಯಿದ್ದಾರೆ.
ರು. 2 ಕೋಟಿ: ಜಲಾಶಯದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿರುವ ಭಾರಿ ನೀರಾವರಿ ಇಲಾಖೆಯ ಎಇಇ ಚಂದ್ರಶೇಖರ್ ಸುಲೇಪೇಟ್ಕರ್, ಈಗಾಗಲೇ ಉದ್ಯಾನವನ ಮತ್ತಿತರ ಕಾಮಗಾರಿಗಾಗಿ ರು. 2 ಕೋಟಿ ಮಂಜೂರಾಗಿದ್ದು, ಸಮೀಪದ 6.35 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಂತ್ರಿಕ ಸಲಹಾ ಮಂಡಳಿಯ ಅನುಮೋದನೆ ಪಡೆದಿದ್ದು, ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳ ಒಪ್ಪಿಗೆ ಬಾಕಿಯುಳಿದಿದೆ ಎಂದು ತಿಳಿಸಿದ್ದಾರೆ. ಪ್ರವಾಸಿ ಮಂದಿರ ದನ ಮೇಯುವ ಸ್ಥಳವಾಗಿ ಪರಿವರ್ತನೆಗೊಂಡಿದೆ ಎಂಬ ಆರೋಪ ಒಪ್ಪಿಕೊಂಡಿರುವ ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರತಿನಿತ್ಯ ಸಾವಿರಾರು ಪ್ರವಾಸಿಗರಿಂದ ಹೆಚ್ಚಿನ ಆದಾಯ ಗಳಿಸಿ ತಾಲೂಕಿನ ಸ್ಥಳವನ್ನು ರಾಜ್ಯಕ್ಕೆ ಪರಿಚಯಿಸುವ ವಿಫುಲ ಅವಕಾಶ ಹೊಂದಿರುವ ಜಲಾಶಯದ ಬಗ್ಗೆ ತಕ್ಷಣ ಎಚ್ಚರಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಜಿನ್ನು ಜನಪ್ರತಿನಿಗಳಲ್ಲಿ ಮನವಿ ಮಾಡಿದ್ದಾರೆ.