ತುಮರಿ ಬಳಿ ಸಂಕ ನಿರ್ಮಾಣಕ್ಕೆ ಮೊರೆ
ಸಾಗರ: ಈಚೆಗೆ ಬಿದ್ದ ಭಾರಿ ಮಳೆಯಿಂದ ತಾಲೂಕಿನ ತುಮರಿ ಸಮೀಪದ ಮಣಕನಮಠದ ಕಾಲುಸಂಕ ತೇಲಿ ಹೋಗಿದ್ದು ಶಾಲಾ ಮಕ್ಕಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡು ದಿನ ಈ ಭಾಗದ ಸಂಚಾರ ಕಡಿದು ಹೋಗಿತ್ತು. ಈಗ ಮತ್ತೆ ಊರಿನ ಜನ ತಾತ್ಕಾಲಿಕವಾಗಿ ಅಡಕೆ ಮರ ಹಾಕಿ ಕಾಲು ಸಂಕ ನಿರ್ಮಿಸಿ ಓಡಾಟ ಆರಂಭಿಸಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರಿನಿಂದಾಗಿ ಈ ಭಾಗದ ಜನ ಸಂಪರ್ಕ ವಂಚಿತರಾಗಿ ದಶಕಗಳೇ ಕಳೆದಿವೆ. ಚುನಾವಣೆ ಬಂದಾಗ ಓಟು ಕೇಳಲು ತಮ್ಮಲ್ಲಿಗೆ ಎಲ್ಲಾ ಪಕ್ಷದವರು ಬರುತ್ತಾರೆ. ಆದರೆ ಈವರೆಗೆ ಆಯ್ಕೆಗೊಂಡ ಯಾರೂ ತಮಗೊಂದು ಕನಿಷ್ಠ ಕಾಲು ಸಂಕ ನಿರ್ಮಿಸಿಕೊಟ್ಟಿಲ್ಲ ಎನ್ನುವುದು ಈ ಭಾಗದ ಜನರ ಅಳಲು.
ಭರವಸೆ ಈಡೇರಲಿಲ್ಲ: ಗೋಪಾಲಕೃಷ್ಣ ಬೇಳೂರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಇಲ್ಲೊಂದು ಸಂಕ ನಿರ್ಮಿಸುವ ಭರವಸೆ ನೀಡಿದ್ದರು. ಎರಡನೇ ಬಾರಿ ಆಯ್ಕೆಯಾದಾಗಲೂ ಅವರು ಇಲ್ಲಿನ ಕಾಲುಸಂಕ ನಿರ್ಮಾಣದ ಬೇಡಿಕೆ ಪ್ರಸ್ತಾಪಿಸಿದಾಗ, ಈ ಬಾರಿ ಖಂಡಿತ ಆಗುತ್ತದೆ ಎಂದು ಜನ ನಂಬಿದ್ದರು. ಆದರೆ ಯಾವುದೂ ಆಗಲಿಲ್ಲ.
ಜಲಗಾರು ಭಾಗದಲ್ಲಿ 15ಕ್ಕೂ ಹೆಚ್ಚು ಮನೆಗಳಿದ್ದು 50ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಭಾಗಕ್ಕೆ ಸೂಕ್ತವೆನಿಸುವ ಜಾಗದಲ್ಲಿ ಸಣ್ಣ ಸೇತುವೆಯನ್ನೇ ನಿರ್ಮಿಸಿ ಕೊಡಬೇಕೆಂಬುದು ಅಲ್ಲಿನ ನಿವಾಸಿಗಳ ಬೇಡಿಕೆ.
ಪ್ರಾಣಾಪಾಯದಿಂದ ಪಾರು: ಮಲೆನಾಡಿನಲ್ಲಿ ಕೆಲವು ಹಳ್ಳಿಯ ಶಾಲಾ ಮಕ್ಕಳು ಶಾಲೆಗೆ ಹೋಗುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಕಳೆದ ವರ್ಷ ಶಾಲೆಗೆ ಹೋಗುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ತೇಲಿ ಹೋದ ಘಟನೆ ನಡೆದಿತ್ತು. ಈ ವರ್ಷ ಇಲ್ಲಿನ ಶಾಲಾ ಮಕ್ಕಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಕಾಗೋಡು ತಿಮ್ಮಪ್ಪನವರು ಮತ್ತೆ ಶಾಸಕರಾಗಿ ಆಯ್ಕೆಯಾಗಿ ಈಚೆಗೆ ಬ್ಯಾಕೋಡಿಗೆ ಬಂದಿದ್ದಾಗ ಜನರು ತಮಗೆ ತಕ್ಷಣ ಕಾಲುಸಂಕ ನಿರ್ಮಿಸಿಕೊಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು. ಕಾಗೋಡು ತಿಮ್ಮಪ್ಪನವರಾದರೂ ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸುತ್ತಾರೋ ಕಾದು ನೋಡಬೇಕು.