ದಿನಪತ್ರಿಕೆ ಓದುವ ಗೀಳು ಬೆಳೆಸಿಕೊಳ್ಳಿ
ಶಿಕಾರಿಪುರ: ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಪತ್ರಿಕೆಯ ಪಾತ್ರ ಮಹತ್ವದ್ದಾಗಿದ್ದು, ಪತ್ರಿಕೆಯನ್ನು ಖರೀದಿಸಿ ಅಭ್ಯಸಿಸುವ ಗೀಳು ಬೆಳೆಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಕೇವಲ ಮೊಬೈಲ್ ಜತೆ ಬಾಹ್ಯ ಸೌಂದರ್ಯ ವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ ಎಂದು ತಾಲೂಕಿನ ನಳ್ಳಿನಕೊಪ್ಪ ಗ್ರಾಮದಲ್ಲಿನ ಮೊರಾರ್ಜಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್. ಸುಮಾ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಹೊಸೂರು ಗ್ರಾಮದ ಮೊರಾರ್ಜಿ ವಸತಿ ಶಾಲೆ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದಿಂದ ಶನಿವಾರ ಆಯೋಜಿಸಲಾಗಿದ್ದ ಪರ್ತಕರ್ತರು ಹಾಗೂ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿನಪತ್ರಿಕೆ ಅಗತ್ಯ: ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಕ್ಷೇತ್ರದ ಬಗ್ಗೆ ಸಮಗ್ರ ಮಾಹಿತಿ ಅನಿವಾರ್ಯವಾಗಿದ್ದು, ಸಂಪೂರ್ಣ ಮಾಹಿತಿಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ದಿನಪತ್ರಿಕೆ ಅಭ್ಯಸಿಸುವ ಪರಿಪಾಠ ಬೆಳೆಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಪರ್ತಕರ್ತ ಎಂ. ರಾಘವೇಂದ್ರ ಸಂವಾದದಲ್ಲಿ ಪಾಲ್ಗೊಂಡು, ನಿರಂತರ ಪತ್ರಿಕೆ ಓದುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಮಾನವೀಯ ಮೌಲ್ಯ ಹೆಚ್ಚಾಗಿ, ಜ್ಞಾಪಕ ಶಕ್ತಿ ವೃದ್ಧಿಯಾಗಿ, ಜೀವನವನ್ನು ಅನುಭವಿಸುವ ದೃಷ್ಟಿ ಬದಲಾಗಿ ಜ್ಞಾನ ಪ್ರಪಂಚದ ಜತೆ ಭಾವ ಪ್ರಪಂಚ ವಿಶಾಲವಾಗಲಿದೆ ಎಂದರು.
ನೈತಿಕ ಪ್ರಜ್ಞೆ ಪರ್ತಕರ್ತರಿಗೆ ಅತಿ ಅವಶ್ಯಕವಾಗಿದ್ದು, ಮೌಢ್ಯತೆಯನ್ನು ಬಿತ್ತುವ ಕಾರ್ಯ ಪತ್ರಿಕೆಯಿಂದ ಸಲ್ಲದು ಎಂದರು. ಮಾದ್ಯಮ ಕ್ಷೇತ್ರ ಅತ್ಯಂತ ವಿಶಾಲವಾಗಿದ್ದು, ಬಗೆಬಗೆಯ ಅನುಭವದ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶವಿದೆ ಎಂದರು.
ಉಪನ್ಯಾಸಕ ಸಂತೋಷ್, ಸಿಂಧೂ, ಪ್ರೀತಿ, ಯೋಗರಾಜ್, ಜಿಯಾವುಲ್ಲಾ, ಮಂಜುನಾಥ್, ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ, ಸದಸ್ಯ ಇ.ಎಚ್. ಬಸವರಾಜ್, ರೇವಣಪ್ಪ, ಚಂದ್ರಶೇಖರ್, ರಘು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.