ಪರೀಕ್ಷೆಯಲ್ಲಿ ಅನುತ್ತೀರ್ಣ; ವಿದ್ಯಾರ್ಥಿನಿ ಆತ್ಮಹತ್ಯೆ
ಕ.ಪ್ರ.ವಾರ್ತೆ, ಸಾಗರ, ಜು.14
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮನನೊಂದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಭದ್ರಾವತಿಯ ಮಂಜೇಗೌಡ ಎಂಬವರ ಪುತ್ರಿ ಉಷಾ (18) ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ವಿಜ್ಞಾನ ಅಭ್ಯಾಸ ಮಾಡುತ್ತಿದ್ದಳು. ಶುಕ್ರವಾರ ಫಲಿತಾಂಶ ಪ್ರಕಟವಾಗಿದ್ದು ಉಷಾ ಅನುತ್ತೀರ್ಣಗೊಂಡಿದ್ದಳು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಪೋಷಕರಿಗೆ ಭದ್ರಾವತಿಗೆ ಬರುತ್ತೇನೆ ಎಂದು ತಿಳಿಸಿದ್ದಳು.
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮಾನಸಿಕವಾಗಿ ನೊಂದಿದ್ದ ಉಷಾ ಭಾನುವಾರ ಬೆಳಿಗ್ಗೆ ಸಾಗರಕ್ಕೆ ಬಂದು ನೆಹರೂ ಮೈದಾನದಲ್ಲಿ ವಿಷ ಸೇವಿಸಿದ್ದಾಳೆ. ವಿಷ ಸೇವಿಸಿ ಒದ್ದಾಡುತ್ತಿದ್ದ ಉಷಾಳನ್ನು ಆಟೋ ಚಾಲಕರೊಬ್ಬರು ನೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟರೂ ಉಷಾಳನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಉಷಾ ಸಾಯುವ ಮೊದಲು ಚೀಟಿಯೊಂದನ್ನು ಬರೆದಿಟ್ಟಿದ್ದು ಅದರಲ್ಲಿ ನನ್ನ ತಂದೆತಾಯಿಯನ್ನು ಕಂಡರೆ ನನಗೆ ತುಂಬಾ ಪ್ರೀತಿ. ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಜೀವನದಲ್ಲಿ ಒಮ್ಮೆ ಜೋಗಜಲಪಾತವನ್ನು ವೀಕ್ಷಿಸಬೇಕು ಎಂಬ ಆಸೆ ನನ್ನದು ಎಂದು ಬರೆದಿಟ್ಟಿದ್ದಾಳೆ. ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯಾಘಾತ: ಸಾವು
ಶ್ರೀ ಕ್ಷೇತ್ರ ವರದಹಳ್ಳಿಗೆ ಹೋಗಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮೃತ ಯುವಕನನ್ನು ರಾಘವೇಂದ್ರ ಶೆಟ್ಟಿ (24) ಎಂದು ಗುರುತಿಸಲಾಗಿದೆ.
ಪಟ್ಟಣದ ಜಿ.ಪಿ. ರಸ್ತೆ ವಾಸಿಯಾಗಿದ್ದ ರಾಘವೇಂದ್ರ ಭಾನುವಾರ ವರದಹಳ್ಳಿಗೆ ಹೋಗಿ ಗುರುಗಳ ದರ್ಶನ ಪಡೆದು, ಅಲ್ಲಿಯೆ ಊಟ ಮುಗಿಸಿ ಬೈಕ್ನಲ್ಲಿ ಬರುವಾಗ ಹೃದಯಾಘಾತಕ್ಕೆ ಒಳಗಾಗಿದ್ದಾನೆ.
ತಕ್ಷಣ ಅವರನ್ನು ಆಸ್ಪತ್ರೆಗೆ ತರುವ ಪ್ರಯತ್ನ ನಡೆಸಲಾಯಿತಾದರೂ ಮಾರ್ಗಮಧ್ಯದಲ್ಲಿಯೆ ಮೃತಪಟ್ಟಿದ್ದಾರೆ.
ಕಾರು ಅಪಹರಣ
ಶಿವಮೊಗ್ಗ: ಗೋಪಾಳದಲ್ಲಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್ ಅವರ ಮನೆ ಮುಂದೆ ನಿಂತಿದ್ದ ಕಾರನ್ನು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಇವರ ಮನೆ ಮುಂದೆ ನಿಂತಿದ್ದ ಮಾರುತಿ -800 ಕಾರನ್ನು ಶನಿವಾರ ನಸುಕಿನಲ್ಲಿ ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ರತ್ನಾಕರ್ ಅವರು ದೂರು ದಾಖಲು ಮಾಡಿದ್ದಾರೆ. ಪ್ರಕರಣ ತುಂಗಾನಗರ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ ಮಾರಾಟ: ವ್ಯಕ್ತಿ ಬಂಧನ
ಶಿವಮೊಗ್ಗ: ಕಳವು ಮಾಡಿ ತಂದಿದ್ದ ಮೊಬೈಲ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಗೋಪಾಳದಲ್ಲಿ ನಡೆದಿದೆ.
ಖದ್ಲರ್ ಬಂಧಿತ ಆರೋಪಿ. ಈತ ಬೇರೆಡೆ ಕಳ್ಳತನ ಮಾಡಿಕೊಂಡು ತಂದಿದ್ದ ಸುಮಾರು 12 ಮೊಬೈಲ್ಗಳನ್ನು ರಾಗಿಗುಡ್ಡದಲ್ಲಿ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಇದರ ಮೌಲ್ಯ 26,500 ಎಂದು ಅಂದಾಜಿಸಲಾಗಿದೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
60 ಸಾವಿರ ಕಳವು
ಶಿವಮೊಗ್ಗ: ಅಪರಿಚಿತ ವ್ಯಕ್ತಿಗಳಿಬ್ಬರು ಅಂಗಡಿ ಮಾಲೀಕ ಹಾಗೂ ಸಿಬ್ಬಂದಿಗಳ ಗಮನವನ್ನು ಬೇರೆಡೆ ಸೆಳೆದು ಸಾವಿರಾರು ರುಪಾಯಿ ಕಳವು ಮಾಡಿರುವ ಘಟನೆ ನಗರದ ಕಾಸಲ ಟ್ರೇಡರ್ಸ್ನಲ್ಲಿ ನಡೆದಿದೆ.
ಸುಮಾರು 30-40 ವರ್ಷ ವಯಸ್ಸಿನ ಇಬ್ಬರು ಅಪರಿಚಿತರು ಕಾಸಲ ಟ್ರೇಡರ್ಸ್ಗೆ ವ್ಯಾಪಾರ ಮಾಡುವ ನೆಪದಲ್ಲಿ ಬಂದು
ಎಲ್ಲರ ಗಮನವನ್ನು ಬೇರಿಡೆ ಸೆಳೆದು ಕ್ಯಾಶ್ ಡ್ರಾನಲ್ಲಿದ್ದ 60,000 ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ದೊಡ್ಡಪೇಟೆಠಾಣೆಯಲ್ಲಿ ದಾಖಲಾಗಿದೆ.