ಸುದ್ದಿ ಸಂಕ್ಷೇಪ
ಸಾಲ ಬಾಧೆ: ರೈತ ಆತ್ಮಹತ್ಯೆ
ಸಾಗರ: ತಾಲೂಕಿನ ಆನಂದಪುರಂ ಹೋಬಳಿ ಕೈರಾ ಗ್ರಾಮದ ಮಹೇಶ್ ಬಿನ್ ಮಂಜಪ್ಪ(41) ಎಂಬ ರೈತ ಸಾಲ ಬಾಧೆಯಿಂದ ಹತಾಶನಾಗಿ ಶನಿವಾರ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಶನಿವಾರ ಬೆಳಿಗ್ಗೆ ಮನೆಯಲ್ಲಿ ತಿಂಡಿ ತಿಂದು ಕಳೆನಾಶಕ ಸಿಂಪಡಿಸುವ ಉದ್ದೇಶದಿಂದ ಹೊಲಕ್ಕೆ ಹೋದವರು ಅಲ್ಲಿಯೇ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಅವರನ್ನು ಆನಂದಪುರಂ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಸಾಗಿಸಲಾಯಿತಾದರೂ ಪ್ರಾಣ ಉಳಿಯಲಿಲ್ಲ. ಮಹೇಶ್ ಅವರು ಜಮೀನಿನ ಆಧಾರದ ಮೇಲೆ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿ ಸುಮಾರು ಒಂದು ಲಕ್ಷ ರು. ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
150 ಕೆಜಿ ಗಾಂಜಾ ವಶ
ಹನೂರು: ಕೊಳ್ಳೇಗಾಲ ತಾಲೂಕಿನ ಕುರಹಟ್ಟಿ ಹೊಸೂರು ಗ್ರಾಮದಲ್ಲಿ ಬೆಳೆಗಳ ಮಧ್ಯ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಮಾಪುರ ಠಾಣಾ ಪೊಲೀಸರು ದಾಳಿ ನಡೆಸಿ ಕುರಹಟ್ಟಿ ಹೊಸೂರು ಗ್ರಾಮದ ಪುಟ್ಟರಾಜು ಎಂಬವರ ಜಮೀನಿನಲ್ಲಿ ಬದನೆ ಮತ್ತು ನೀರಿನ ಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 150 ಕೆಜಿ ತೂಕದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ.