ಪರಿಸರ ವೇದಿಕೆಯಿಂದ ಗಿಡನೆಡುವ ಕಾರ್ಯಕ್ರಮ
ಕ.ಪ್ರ.ವಾರ್ತೆ, ಭದ್ರಾವತಿ, ಜು.15
ಕೇದಾರನಾಥ ಧಾಮದಲ್ಲಿ ಪ್ರಕೃತಿ ವಿಕೋಪದಿಂದ ಮಡಿದ ಭಕ್ತರು ಹಾಗೂ ಅವರ ಉಳಿವಿಗಾಗಿ ಸೆಣಸಾಡಿ ಕರ್ತವ್ಯ ನಿರ್ವಹಿಸುವಾಗ ಪ್ರಾಣತೆತ್ತ ಯೋಧರ ನೆನಪಿಗಾಗಿ ಮತ್ತು ಏರುತ್ತಿರುವ ತಾಪಮಾನ ತಗ್ಗಿಸಲು ಜಾಗೃತಿ ಮೂಡಿಸುವ ಸಲುವಾಗಿ ಭದ್ರಾವತಿ ಪರಿಸರ ವೇದಿಕೆ ಇತ್ತೀಚೆಗೆ ಹುಣಸೆಕಟ್ಟೆ ಜಂಕ್ಷನ್ ಗ್ರಾಪಂ ರಸ್ತೆಯಲ್ಲಿ ಸಸಿನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಸಸಿ ನೆಟ್ಟು ಮಾತನಾಡಿದ ಶಿವಮೊಗ್ಗದ ನಿವೃತ್ತ ಕನ್ನಡ ಪ್ರೊ. ಎಂ.ಬಿ. ನಟರಾಜ್ ಸದ್ದುಗದ್ದಲವಿಲಲ್ದೆ ಪರಿಸರ ಟ್ರಸ್ಟ್ನ ಮೂಲಕ ಪರಿಸರ ಶಿವರಾಂ ಅವರು ತಮ್ಮ ಪಾಡಿಗೆ ತಾವು ಗಿಡನೆಡುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಕಾರ್ಯವೆಂದರು.
ಪರಿಸರ ಟ್ರಸ್ಟಿನ ಕಾರ್ಯದರ್ಶಿ ಭದ್ರಾವತಿ ಶಿವರಾಂ ಮಾನವನ ದುರಾಸೆಯಿಂದಾಗಿ ನಶಿಸುತ್ತಿರುವ ಪರಿಸರದಿಂದಾಗಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ, ಜಾಗತೀಕರಣ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಮಾನವ ನಿಸರ್ಗದ ಮೇಲೆ ಎಗ್ಗಿಲ್ಲದೇ ದೌರ್ಜನ್ಯವೆಸಗುತ್ತಲೇ ಇದ್ದಾನೆ ಎಂದು ವಿಷಾದಿಸಿದರು.
ಗ್ರಾಮದ ಮುಖಂಡ ದೇವಪ್ಪಗೌಡ, ಬ್ರಿಷ್ಟೇಗೌಡ ಮೊದಲಾದವರು ಹಾಜರಿದ್ದರು.
ವೇದಿಕೆ ಕಾರ್ಯದರ್ಶಿ ಮೋಹನ್ ಕುಮಾರ್ ಮತ್ತು ಶಿವಕುಮಾರ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
--
ನಾಟ್ಯ ಸಂಜೆ ನೃತ್ಯ ಕಾರ್ಯಕ್ರಮ
ಶಿವಮೊಗ್ಗ: ವಿದ್ವಾನ್ ಕೇಶವಕುಮಾರ್ ಪಿಳೈ ತಮ್ಮ ನಟನಂ ಬಾಲ ನಾಟ್ಯ ಕೇಂದ್ರದ ರಜತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಜುಲೈ 17ರಂದು ಸಂಜೆ 6ರಿಂದ ನಗರದ ಕುವೆಂಪು ರಂಗಮಂದಿರದಲ್ಲಿ ನಾಟ್ಯ ಸಂಜೆ 1989-2013ರ ವಿಶೇಷ ನೃತ್ಯ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಜಯನಗರ ಠಾಣೆಯ ಸಬ್ಇನ್ಸ್ ಪೆಕ್ಟರ್ ಭರತ್ ಕುಮಾರ್ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ವೈ.ಎಸ್. ಮಂಜುನಾಥ್ ವಹಿಸುವರು.
ಕೇಂದ್ರದ ಎಲ್ಲಾ ಜೂನಿಯರ್ ಮತ್ತು ಸೀನಿಯರ್ ಕಲಾವಿದರಿಂದ ನೃತ್ಯ ಪ್ರದರ್ಶನ ಇರುತ್ತದೆ ಎಂದು ಕೇಂದ್ರದ ಕೇಶವಕುಮಾರ್ ಅವರು ಈ ಸಂದರ್ಭದಲ್ಲಿ ಪಿಳೈ ತಿಳಿಸಿದ್ದಾರೆ.