ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
ಕ.ಪ್ರ.ವಾರ್ತೆ ಶಿವಮೊಗ್ಗ ಜು.15 ಅಖಿಲ ಭಾರತ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತಿನ ಶಾಶ್ವತ ಸಂಯೋಜನೆಗೆ ಒಳಪಟ್ಟ ನಗರದ ಭಾರತಿ ಐಟಿಐ ಸಂಸ್ಥೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲು ಉದ್ದೇಶಿಸಿದೆ ಎಂದು ಸಂಸ್ಥೆ ಕಾರ್ಯದರ್ಶಿ ಸುರೇಶ್ ಕೆ. ಬಾಳೆಗುಂಡಿ ತಿಳಿಸಿದ್ದಾರೆ.
ಪರಿಣಿತ ಶಿಕ್ಷಕರನ್ನು ಹೊಂದಿ ಅತ್ಯಾಧುನಿಕ ಯಂತ್ರೋಪಕರಣ ಹಾಗೂ ನವೀನ ತಂತ್ರಜ್ಞಾನದೊಂದಿಗೆ ಸುಸಜ್ಜಿತ ಕಟ್ಟಡದಲ್ಲಿ ಸ್ಥಾಪಿತಗೊಂಡು ಖಾಸಗಿ ಐಟಿಐ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ಶಿವಮೊಗ್ಗಕ್ಕೆ ಮಾದರಿ ಸಂಸ್ಥೆಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ವಿದ್ಯಾರ್ಥಿ ವೇತನ: 2007ನೇ ಸಾಲಿನಲ್ಲಿ ಆರಂಭಗೊಂಡ ಭಾರತಿ ಐಟಿಐ ಕಾಲೇಜಿನಲ್ಲಿ ಫಿಟ್ಟರ್, ಎಲೆಕ್ಟ್ರಾನಿಕ್, ಮೆಕ್ಯಾನಿಕ್, ಟರ್ನರ್ ಹಾಗೂ ಎಲೆಕ್ಟ್ರಿಷಿಯನ್ ಬ್ರಾಂಚ್‌ಗಳನ್ನು ಹೊಂದಿರುತ್ತದೆ. ಈ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಭಾರತ ಸರ್ಕಾರ ಕೊಡುವ ವಿದ್ಯಾರ್ಥಿ ವೇತನ ಪಡೆಯಲು ಅರ್ಹಹರಿರುತ್ತಾರೆ.
ತರಬೇತಿ ಪೂರೈಸಿದ ತಕ್ಷಣ ಶಿವಮೊಗ್ಗದ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸುವ ವ್ಯವಸ್ಥೆಯನ್ನು ರೂಢಿಸಿಕೊಂಡು ಬರಲಾಗುತ್ತಿದೆ.
ಅದರಂತೆ ಕಾಲೇಜಿನಲ್ಲಿ ಕಲಿತು ಉತ್ತೀರ್ಣ, ಅನುತ್ತೀರ್ಣರಾದ ವಿದ್ಯಾರ್ಥಿಗಳು ತಕ್ಷಣಕ್ಕೆ ಉದ್ಯೋಗಸ್ಥರಾಗಲು ಸಂಸ್ಥೆ ತನ್ನದೇ ಆದ ಬೆಂಬಲವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಕೈಗಾರಿಗಳಲ್ಲಿ ಉದ್ಯೋಗವನ್ನು ನೀಡಲಾಗಿದೆ.
ಸೇವಾ ಮನೋಭಾವ: ಸಾಮಾಜಿಕ ಬದ್ಧತೆ, ಸೇವಾ ಮನೋಭಾವದಿಂದ ಪ್ರತಿವರ್ಷ ಅತ್ಯಂತ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದೊಂದಿಗೆ ಪ್ರವೇಶ ನೀಡಲಾಗುತ್ತಿದೆ. ಹಾಗೂ ಪ್ರತಿ ಬ್ರಾಂಚ್‌ಗೆ ಇಬ್ಬರು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾರ್ಜನೆಯ ಸಂಪೂರ್ಣ ಖರ್ಚನ್ನು ಭಾರತಿ ಐಟಿಐ ಕಾಲೇಜಿನ ಆಡಳಿತ ಮಂಡಳಿ ವೆಚ್ಚವನ್ನುಬರಿಸಲಿದೆ.
ಈ ವರ್ಷ ಆರ್ಥಿಕವಾಗಿ ಹಿಂದುಳಿದ ಎಸ್‌ಸಿ, ಎಸ್ಟಿ, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ಜನಾಂಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಫಿಟ್ಟರ್ ವಿಭಾಗಕ್ಕೆ 30 ವಿದ್ಯಾರ್ಥಿಗಳಿಗೆ, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದ 16 ವಿದ್ಯಾರ್ಥಿಗಳಿಗೆ ಹಾಗೂ ಟರ್ನರ್ ವಿಭಾಗದ 12 ವಿದ್ಯಾರ್ಥಿಗಳಿಗೆ 2013ನೇ ಸಾಲಿನ ಐಟಿಐ ಪ್ರವೇಶಕ್ಕೆ ಪೂರ್ಣ ಶುಲ್ಕ ವಿನಾಯಿತಿಯನ್ನು ನೀಡಲಾಗುತ್ತಿದೆ.
ಡೊನೇಷನ್ ಇಲ್ಲ: ಯಾವುದೇ ಅಭಿವೃದ್ಧಿ ಶುಲ್ಕ ಹಾಗೂ ಡೋನೇಷನ್ ಪಡೆಯಲಾಗುವುದಿಲ್ಲ. ಪ್ರಯೋಗ ಶಾಲಾ, ಪ್ರಾಯೋಗಿಕ ಮೂಲವಸ್ತುಗಳ ಬಾಬ್ತು ಮಾಸಿಕ ರು. 300 ಮಾಸಿಕ ಭರಿಸಬೇಕಾಗುತ್ತದೆ. ಅರ್ಹ ವಿದ್ಯಾರ್ಥಿಗಳು ನಿಯಮಾನುಸಾರ ಸರ್ಕಾರಿ ಹಾಸ್ಟೆಲ್ ಸೇವೆ ಪಡೆಯಲು ಕೂಡಾ ಕ್ರಮ ಕೈಗೊಳ್ಳಲಾಗುತ್ತದೆ.
ಸಮಾಜದಲ್ಲಿ ಆರ್ಥಿಕ, ಹಿಂದುಳಿದ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಈ ಅವಕಾಶವನ್ನು ಭಾರತಿ ಐಟಿಐ ಕಾಲೇಜು ಕಲ್ಪಿಸಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಡೆದುಕೊಳ್ಳುವಂತೆ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಕೆ. ಬಾಳೆಗುಂಡಿ ಮನವಿ ಮಾಡಿದ್ದಾರೆ.