ಬೆಂಕಿ ಆಕಸ್ಮಿಕ: ಹೆಚ್ಚೆ ಗ್ರಾಪಂ ನೆರವು
ಕ.ಪ್ರ.ವಾರ್ತೆ, ಸೊರಬ, ಜು.15
ತಾಲೂಕಿನ ಹೆಚ್ಚೆ ಗ್ರಾಪಂ ವ್ಯಾಪ್ತಿಯ ಕೋಣನಮನೆ ಗ್ರಾಮದಲ್ಲಿ ಇತ್ತೀಚೆಗೆ ಬೆಂಕಿ ಆಕಸ್ಮಿಕದಲ್ಲಿ ಮನೆ, ಸಾಮಾಗ್ರಿಗಳನ್ನು ಕಳೆದುಕೊಂಡ ಲೋಕೇಶ್ ಕುಟುಂಬಕ್ಕೆ ಹೆಚ್ಚೆ ಗ್ರಾಪಂ ನೆರವು ನೀಡಿದೆ.
ಬೆಂಕಿ ಅಪಘಾತದಲ್ಲಿ ಮನೆಯಲ್ಲಿದ್ದ ನಗ, ನಾಣ್ಯ, ಬತ್ತ, ಅಡಕೆ, ದಿನಬಳಕೆ ಆಹಾರ ಸಾಮಾಗ್ರಿ ಮೊದಲಾದವು ಪೂರ್ಣ ಸುಟ್ಟು ಭಸ್ಮವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಪಂ ಸಾಂತ್ವನ ನೀಡಿ, ತುರ್ತು ಪರಿಹಾರ ರೂಪದ ಚೆಕ್ ಹಾಗೂ ಬಸವ ಸಮಿತಿ ಯೋಜನೆಯಡಿಯಲ್ಲಿ ಮನೆ ಮಂಜೂರಾತಿ ಕುರಿತಂತೆ ಭರವಸೆ ನೀಡಿದೆ.
ಗ್ರಾಪಂ ಅಧ್ಯಕ್ಷ ಎಚ್.ಕೆ. ಜಯಶೀಲಗೌಡ, ಉಪಾಧ್ಯಕ್ಷ ನಮೋಕ್ಷ, ಸದಸ್ಯ ಗಂಗಾಧರಗೌಡ, ಕಾರ್ಯದರ್ಶಿ ಮೋಹನ್, ರಮೇಶ್, ಲಿಂಗರಾಜಗೌಡ, ದಾನಶೇಖರ್, ಹೊಳಿಯಪ್ಪ ಮೊದಲಾದವರು ತೆರಳಿ ಸಾಂತ್ವನ ಪರಿಹಾರ ನೀಡಿ ಚೆಕ್ ವಿತರಿಸಿದರು.