ವಿಜ್ಞಾನ ಶಿಕ್ಷಕರ ವರ್ಗಾವಣೆಗೆ ಆಗ್ರಹ
ಕ.ಪ್ರ.ವಾರ್ತೆ, ಶಿಕಾರಿಪುರ, ಜು.15
ಪಟ್ಟಣದ ದೇವರಾಜ ಅರಸ್ ನಗರದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳು ವಿಜ್ಞಾನ ವಿಷಯ ಬೋಧನೆ ಅರ್ಥವಾಗದೆ ಪರಿತಪಿಸಿ ಸೋಮವಾರ ಶಾಲೆ ಬಹಿಷ್ಕರಿಸಿ ಬದಲಿ ಶಿಕ್ಷಕರಿಂದ ಬೋಧನೆ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಶಿಕ್ಷಕಿ ಪಠ್ಯಪುಸ್ತಕದಲ್ಲಿ ಕನ್ನಡಕ್ಕೆ ಭಾಷಾಂತರಿಸಿಕೊಂಡು ಪಾಠ ಮಾಡುತ್ತಿದ್ದು ಕಳೆದ ತಿಂಗಳಿನಿಂದ ವಿಜ್ಞಾನ ಪಾಠ ಅರ್ಥವಾಗದೆ ಪರಿತಪಿಸುತ್ತಿರುವುದಾಗಿದೆ ಎಂದು ಅಳಲನ್ನು ತೋಡಿಕೊಂಡರು. ಕನ್ನಡಕ್ಕೆ ಭಾಷಾಂತರಿಸಿಕೊಂಡು ಪಾಠ ಮಾಡುತ್ತಿರುವ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಇಂತಹ ಕ್ರಮದಿಂದ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅನುಮಾನ ಎಂದರು.
ವಿದ್ಯಾರ್ಥಿಗಳ ಪ್ರತಿಭಟನೆ ಬೆಂಬಲಿಸಿ ಅಕ್ಕಪಕ್ಕದ ತಾಲೂಕಿನ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೂಡಲೇ ಬದಲಿ ವ್ಯವಸ್ಥೆ ಮಾಡಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣಾಧಿಕಾರಿ ಶಿವದೇವ್ ಕೂಡಲೇ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಚಂದ್ರಪ್ಪ ರವರಿಗೆ ದೂರವಾಣಿ ಮೂಲಕ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಮಾಹಿತಿ ನೀಡಿದಾಗ ಕೂಡಲೇ ವಿಜ್ಞಾನ ವಿಷಯಕ್ಕೆ ಪರ್ಯಾಯ ಶಿಕ್ಷಕರ ವ್ಯವಸ್ಥೆ ಜತೆಗೆ ಶಾಲೆಯ ಪ್ರಾಚಾರ್ಯ ರಾಜುರವರ ವರ್ಗಾವಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಭರವಸೆ ನೀಡಿದರು.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಲೆಯ ಗಣಿತ ಶಿಕ್ಷಕ ಸತೀಶ್, ಹೊರಗುತ್ತಿಗೆ ಆಧಾರದ ಶಿಕ್ಷಕರು ನಿತ್ಯ 6 ತರಗತಿಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗಿದ್ದು, ಭೌತಶಾಸ್ತ್ರ ಶಿಕ್ಷಕರ ಹುದ್ದೆ ಖಾಲಿಯಾಗಿರುವುದರಿಂದ ಈ ವಿಷಯ ಹೊರತುಪಡಿಸಿದ ಶಿಕ್ಷಕಿಗೆ ಬೋಧನೆ ಕಠಿಣವಾಗಿ ಸಮಸ್ಯೆ ಉದ್ಭವಿಸಿದ್ದು ಹೊರಗುತ್ತಿಗೆ ಶಿಕ್ಷಕರು ಕನಿಷ್ಠ ವೇತನಕ್ಕೆ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಈ ಬಗ್ಗೆ ನ್ಯಾಯಾಲಯ ಕಾಯಂಗೊಳಿಸಲು ಸೂಚಿಸಿದ್ದರೂ ರಾಜ್ಯ ವಸತಿ ಶಿಕ್ಷಣ ಸಂಸ್ಥೆ ಜಾಣ ಮೌನವಹಿಸಿದೆ.
ಕೂಡಲೇ ಕಾಲಕಾಲಕ್ಕೆ ವೇತನ ಸಹಿತ ಕಾಯಂಗೊಳಿಸುವತ್ತ ಚಿಂತನೆಗೆ ಮನವಿ ಮಾಡಿದ್ದಾರೆ. ಪೋಷಕರಾದ ಸೊರಬದ ಹೊಳೆಲಿಂಗಪ್ಪ, ಉಮೇಶ್, ಕೃಷ್ಣಪ್ಪ, ಶಂಕರನಾಯ್ಕ, ವೆಂಕಟೇಶ್, ರಮೇಶ್, ನಾಗರಾಜ್ ಇದ್ದರು.
--