ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿಮುಲ್‌ನಿಂದ ವಿದ್ಯಾರ್ಥಿ ವೇತನ

Lingaraj Badiger
Updated On : 16 Jul 2013, 10:53 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.15
ಹಾಲು ಉತ್ಪಾದನೆ ಮತ್ತು ಮಾರಾಟಕ್ಕೆ ಸೀಮಿತವಾಗಿದ್ದ ಶಿಮುಲ್ ಸಂಸ್ಥೆ ತನ್ನ ಸದಸ್ಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಲ್ಯಾಣ ಟ್ರಸ್ಟ್ ಮೂಲಕ ರೈತರಿಗೆ ಬೇರೆ ಬೇರೆ ರೀತಿಯಿಂದ ನೆರವಾಗುತ್ತಿದೆ ಎಂದು ಶಿಮುಲ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ್ ಹೇಳಿದರು.
ಶಿಮುಲ್ ಪ್ರಾಯೋಜಿತ ಕಲ್ಯಾಣ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಟ್ರಸ್ಟ್ ಮೂಲಕ ಬೇರೆ ಬೇರೆ ರೀತಿಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಸದಸ್ಯರು ಮೃತಪಟ್ಟಲ್ಲಿ ಆ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಲಾಗುವುದು. ಸದಸ್ಯರ ಎಸ್‌ಎಸ್‌ಎಲ್‌ಸಿಸಿ ಮತ್ತು ಪಿಯುಸಿ ಓದುತ್ತಿರುವ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.
ವಿಸ್ತರಣೆಗೆ ಚಿಂತನೆ: ಶಿಮುಲ್ ಸಂಸ್ಥೆಯಿಂದ ಮಾರಾಟವಾಗುವ ಪ್ರತಿ ಲೀಟರ್ ಹಾಲಿಗೆ ಐದು ಪೈಸೆಯಂತೆ ಹಣವನ್ನು ಕಲ್ಯಾಣ ಟ್ರಸ್ಟ್‌ಗೆ ನೀಡುತ್ತಿದ್ದು, ಇದನ್ನು ವಿಮೆಯಲ್ಲಿ ತೊಡಗಿಸಲಾಗುತ್ತಿದೆ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಈ ಟ್ರಸ್ಟ್ ಕಾರ್ಯಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಲು ಚಿಂತನೆ ನಡೆದಿದೆ ಎಂದರು.
ಶಿಮುಲ್ ಆಡಳಿತ ನಿರ್ದೇಶಕ ಇ.ಎಸ್. ಅಕ್ಕಿ ಮಾತನಾಡಿ, ಉತ್ತಮ ಅಂಕ ಗಳಿಸಿದವರಿಗೆ ಕೆಎಂಎಫ್ ವತಿಯಿಂದ 365 ದಿನ ಹಾಲು ನೀಡಲಾಗುವುದು. ಇದೇ ರೀತಿ ಕೆಎಂಎಫ್ ವತಿಯಿಂದ ಸದಸ್ಯರ ಮಕ್ಕಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಇದೆ ಎಂದು ತಿಳಿಸಿದರು.
ನಿಧನರಾದ ಐವರು ಸದಸ್ಯರ ಕುಟುಂಬಗಳಿಗೆ ಇದೇ ಸಂದರ್ಭದಲ್ಲಿ ತಲಾ 10 ಸಾವಿರವನ್ನು ಕೆ.ಎಲ್. ಜಗದೀಶ್ವರ್ ವಿತರಿಸಿದರು.
ನಿರ್ದೇಶಕ ತುಂಬ್ರಮನೆ ಚಂದ್ರಶೇಖರ್, ತಾಪಂ ಸದಸ್ಯೆ ಗೀತಾ, ಹರಮಘಟ್ಟ ಗ್ರಾಪಂ ಅಧ್ಯಕ್ಷ ಪರಮೇಶ್ವರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ವಾಸನ್ ಐ ಕೇರ್‌ನ ಜಿ.ಎಸ್. ವೆಂಕಟೇಶ ರಾವ್ ನೇತೃತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆದು ಅನೇಕರು ಇದರ ಸದುಪಯೋಗ ಪಡೆದುಕೊಂಡರು. ಹರಮಘಟ್ಟ ಹಾಲು ಉತ್ಪಾದಕರ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  
ಚಂದ್ರಶೇಖರ್ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಎಂ.ಪಿ.ಹನುಮಂತಪ್ಪ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement