ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಂಜನಾಪುರ ಜಲಾಶಯ ಏರಿಯಲ್ಲಿ ಬಿರುಕು

Lingaraj Badiger
Updated On : 17 Jul 2013, 10:57 am

ಕ.ಪ್ರ.ವಾರ್ತೆ, ಶಿಕಾರಿಪುರ, ಜು.16
ತಾಲೂಕಿನ ಅಂಜನಾಪುರ ಜಲಾಶಯದ ಮಣ್ಣಿನ ಏರಿಯಲ್ಲಿ ಬಿರುಕು ಕಾಣಿಸಿಕೊಂಡು ನೀರು ಹರಿಯುತ್ತಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನೀರಿನ ಒತ್ತಡ ಕಡಿಮೆಗೊಳಿಸಲು ತಾತ್ಕಾಲಿಕವಾಗಿ ಕೆಲ ಗೇಟ್ ತೆರೆದು ನೀರನ್ನು ನಾಲೆ ಮೂಲಕ ಹೊರಬಿಟ್ಟಿದ್ದಾರೆ.
ತಾಲೂಕಿನ ಅಂಜನಾಪುರ ಜಲಾಶಯ 1.8 ಟಿಎಂಸಿ ನೀರು ಸಂಗ್ರಹವಾಗುವ ಬಹು ದೊಡ್ಡ ಜಲಾಶಯ ವಾಗಿದ್ದು, ಕಳೆದ ಕೆಲ ದಿನದಿಂದ ಹೆಚ್ಚಿನ ಮಳೆಯಿಂದಾಗಿ ನೀರು ಸಂಪೂರ್ಣ ಪ್ರಮಾಣದಲ್ಲಿ ಶೇಖರಣೆಗೊಂಡು ಆಕರ್ಷಕವಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಲಾಶಯದ ವಿಶ್ವ ಪ್ರಸಿದ್ಧ ಗೋಡ್ ಬೋಲೆ ಗೇಟ್‌ನ 22 ರಂದ್ರದಿಂದ ನೀರು ಹೊರಹೋಗುವ ದೃಶ್ಯ ವೀಕ್ಷಿಸಿದ್ದರು.
ಇದೀಗ ಸೋಮವಾರದಿಂದ ಮಳೆ ಇಳಿಮುಖವಾದ ಕಾರಣ ಗೇಟ್‌ನಲ್ಲಿ ನೀರು ಹರಿಯುವ ಪ್ರಮಾಣ ಕಡಿಮೆಯಾಗಿ ಎಡದಂಡೆ ನಾಲೆಯಲ್ಲಿ ಬಿರುಕು ಕಾಣಿಸಿಕೊಂಡು ಸಣ್ಣ ಪ್ರಮಾಣದಲ್ಲಿ ಪೋಲಾಗುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯ ಅಚ್ಚುಕಟ್ಟುದಾರ ರೈತ ಟಿ.ಕೆ. ಗೋಪಾಲ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ತಕ್ಷಣ ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆ ವಿಭಾಗೀಯ ಅಧಿಕಾರಿ ಮಂಜುನಾಥ್, ಕಿರಿಯ ಅಭಿಯಂತರ ರಾಮಪ್ಪ ಮತ್ತಿತರ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಗೋಡ್ ಬೋಲೆ ಗೇಟ್ 12 ರಂದ್ರವನ್ನು ತೆಗೆಸಿ ನೀರಿನ ಒತ್ತಡ ಕಡಿಮೆಗೊಳಿಸುವ ಪ್ರಯತ್ನವನ್ನು ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಚ್ಚುಕಟ್ಟುದಾರ ರೈತ ಟಿ.ಕೆ. ಗೋಪಾಲ್, ಕಳೆದ ವರ್ಷ ಇದೇ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದಾಗ ಮರಳು, ಕಲ್ಲು ಪುಡಿಯ ಚೀಲದ ಮೂಲಕ ಬಿರುಕು ತಾತ್ಕಾಲಿಕವಾಗಿ ಅಧಿಕಾರಿಗಳ ಸೂಚನೆ ಮೇರೆಗೆ ತಡೆಹಿಡಿಯಲು ಎಲ್ಲಾ ರೀತಿಯ ಶ್ರಮವಹಿಸಿದ್ದಾಗಿ ತಿಳಿಸಿದರು. ಬಿರುಕು ತಾತ್ಕಾಲಿಕವಾಗಿ ಮುಚ್ಚಲು ಶ್ರಮದ ಜತೆಗೆ ಹಣ ವ್ಯಯಿಸಿದ್ದು ಇಂದಿಗೂ ಅಧಿಕಾರಿಗಳು ಹಣ ವಾಪಾಸು ನೀಡುವಲ್ಲಿ ವಿಳಂಬ ದೋರಣೆ ಅನುಸರಿಸುತ್ತಿದ್ದಾರೆ ಎಂದರು.
ಬೇಸಿಗೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾದಾಗ ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕಾದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದೀಗ ಬಿರುಕು ಕಳೆದ ಬಾರಿಗಿಂತ ದೊಡ್ಡದಾಗಿ ಆತಂಕ ಸೃಷ್ಟಿಸಿದೆ ಎಂದರು.
ರೈತರಿಗೆ ತೊಂದರೆ: ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಧಿಕಾರಿಗಳು ಸಂಗ್ರಹವಾಗಿರುವ ನೀರನ್ನು ಹೊರಹಾಕಿ ರೈತರಿಗೆ ಮುಂದಿನ ದಿನದಲ್ಲಿ ನೀರು ದೊರೆಯದಂತೆ ಅನ್ಯಾಯವೆಸಗುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ರೈತರು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಮನೆ ಗ್ರಾಮದ ರೈತ ಮಲ್ಲೇಶಪ್ಪ ಮಾತನಾಡಿ, ಜಲಾಶಯದ ಏರಿಗೆ ಹೊಂದಿಕೊಂಡು ಹಲವು ಗಿಡಗಂಟಿಗಳು ಬೆಳೆದು ಇದೀಗ ಮರವಾಗುತ್ತಿದ್ದು ಇವು ಮುಂದಿನ ದಿನದಲ್ಲಿ ಬೇರು ಕೊರೆದು ಜಲಾಶಯಕ್ಕೆ ಬಿರುಕು ಉಂಟಾಗುವ ಎಲ್ಲ ಲಕ್ಷಣಗಳಿದ್ದರೂ ಇಂದಿಗೂ ಗಿಡ ಗಂಟಿ, ಮರಗಳನ್ನು ಬೇರು ಸಹಿತ ಇಲಾಖೆ ಕಿತ್ತೊಗೆಸಿ ನಿರ್ವಹಣೆ ಕಾರ್ಯವನ್ನು ಮಾಡುತ್ತಿಲ್ಲ. ಗಿಡ ಮರ ತೆಗೆಯಲು 2 ಲಕ್ಷ ಲಪಟಾಯಿಸಿದ ಬಗ್ಗೆ ಎಲ್ಲೆಡೆ ಅನುಮಾನವಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬಿರುಕಿನಿಂದ ಬಹು ದೊಡ್ಡ ಆತಂಕ ಸೃಷ್ಟಿಸಿದ್ದರೂ ಇಲಾಖೆಯ ತಾ.ಮಟ್ಟದ ಹಿರಿಯ ಅಧಿಕಾರಿ ಎಇಇ ಚಂದ್ರಶೇಖರ ಸುಲೇಪೇಟ್ಕರ್ ಸ್ಥಳಕ್ಕೆ ಆಗಮಿಸದೆ ಗೊಂದಲ ಹುಟ್ಟಿಹಾಕಿದ್ದಾರೆ. ಸ್ಥಳಕ್ಕೆ ಯಡಿಯೂರಪ್ಪನವರ ಆಪ್ತ ಸಹಾಯಕ ಗುರುಮೂರ್ತಿ, ನಾಗರಾಜಪ್ಪ, ಸುಕೇಂದ್ರಪ್ಪ, ರಾಜಪ್ಪ ಆಗಮಿಸಿ ಅಧಿಕಾರಿಗಳ ಜತೆ ಚರ್ಚಿಸಿದರು. ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement