ಕ್ರೀಡೆಯಿಂದ ದೇಹ, ಮನಸ್ಸಿಗೆ ಚೈತನ್ಯ: ಬನ್ಸಲ್
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.16
ಭಾರತೀಯ ಜೀವ ವಿಮಾ ನಿಗಮ ನಗರದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 14ನೇ ಸಾಲಿನ ದಕ್ಷಿಣ ಮಧ್ಯವಲಯ 47ನೇ ವಾಲಿಬಾಲ್, ಚೆಸ್ ಮತ್ತು ಕೇರಂ ಪಂದ್ಯಾವಳಿಗೆ ಮಂಗಳವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಪಂದ್ಯಾವಳಿಯಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ 17 ವಿಭಾಗಗಳಿಂದ ಸುಮಾರು 200ಕ್ಕೂ ಅಧಿಕ ಪುರುಷರು ಮತ್ತು ಮಹಿಳಾ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಕ್ರೀಡೆ ಪ್ರವೃತ್ತಿಯಾಗಲಿ: ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ಹೊಸ ಚೈತನ್ಯ ದೊರೆಯುತ್ತದೆ. ಮನುಷ್ಯ ಹೆಚ್ಚು ಕ್ರೀಯಾಶೀಲವಾಗಿರಬೇಕಾದರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ವೃತ್ತಿಯೊಂದಿಗೆ ಕ್ರೀಡೆಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ವೃತ್ತಿಯಲ್ಲಿ ಮತ್ತಷ್ಟು ನೈಪುಣ್ಯತೆ ಸಾಧಿಸಲು ಸಾಧ್ಯ ಎಂದರು.
ಈ ಕ್ರೀಡಾಕೂಟದಿಂದ ದಕ್ಷಿಣವಲಯದ ಎಲ್ಲಾ ಎಲ್‌ಐಸಿ ನೌಕರರು ಒಂದೆಡೆ ಸೇರುವಂತಾಗಿದೆ ಎಂದ ಅವರು, ಶಿವಮೊಗ್ಗ ಒಂದು ಸುಂದರ ತಾಣ. ಇಲ್ಲಿ ಉತ್ತರ ಭಾರತದ ಚಿರಾಪುಂಜಿಯಂತೆ ಮಳೆಯಾಗುತ್ತದೆ. ಅದೇ ರೀತಿಯ ರಾಜಸ್ಥಾನದ ಬಿಸಿಲನ್ನು ನೆನಪಿಸುವ ಬಯಲು ಸೀಮೆಯೂ ಇದೆ. ಹಾಗಾಗೀ ಈ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಳುಗಳು ಕ್ರೀಡಾಕೂಟಕಷ್ಟೇ ಸೀಮಿತಗೊಳ್ಳದೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂದು ಸಲಹೆ ನೀಡಿದರು.
ಚೆಸ್ ಪಂದ್ಯಾವಳಿಯನ್ನು ಎಜ್ಯುರೈಟ್ ತರಬೇತಿ ಅಕಾಡೆಮಿಯ ನಿರ್ದೇಶಕ ಎನ್. ದಿವಕಾರರಾವ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಯುವಜನಾ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಕೆ. ಶಶಿ, ಭಾರತೀಯ ಜೀವ ವಿಮಾ ನಿಗಮದ ವ್ಯವಸ್ಥಾಪಕ ಎಂ. ಬಾಲಯೋಗಿ, ಮಾರುಕಟ್ಟೆ ವ್ಯವಸ್ಥಾಪಕ ಜಕ್ಕಣ್ಣನವರ್ ಮತ್ತಿತರರು ಇದ್ದರು.