ದಲಾಯಿ ಲಾಮ ನಗರದಲ್ಲಿ ವಾಸ್ತವ್ಯ
ಶಿವಮೊಗ್ಗ: ಬೌದ್ಧ ಧರ್ಮದ ವಿಶ್ವಗುರು 14ನೇ ದಲಾಯಿ ಲಾಮ (ತೆನ್ಝಿನ್ ಗ್ಯಾಸ್ಟೋ) ಮಂಗಳವಾರ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡಿದರು.
ಕಳೆದ 10 ದಿನಗಳಿಂದ ರಾಜ್ಯ ಪ್ರವಾಸದಲ್ಲಿರುವ ಅವರು, ಮಧ್ಯಾಹ್ನ 3.30ರ ವೇಳೆಗೆ ನಗರಕ್ಕಾಗಮಿಸಿ ಪ್ರವಾಸಿ ಮಂದಿರದಲ್ಲಿ ತಂಗಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಜಿಲ್ಲಾಡಳಿತದ ಪರವಾಗಿ ದಲಾಯಿ ಲಾಮ ಅವರನ್ನು ಸ್ವಾಗತಿಸಿ, ಗೌರವ ವಂದನೆ ಸಲ್ಲಿಸಿದರು.
ಬಿಗಿ ಭದ್ರತೆ: ವಿಶೇಷ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ದಲಾಯಿ ಲಾಮಾ ಅವರಿಗೆ ಶಿವಮೊಗ್ಗದಲ್ಲಿ ಡಿವೈಎಸ್ಪಿ ರ್ಯಾಂಕಿಂಗ್ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.
ಬೆಳಿಗ್ಗೆಯಿಂದಲೇ ಪ್ರವಾಸಿ ಮಂದಿರಕ್ಕೆ ಪೊಲೀಸ್ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಪೂರ್ವ ನಿಗದಿತ 14 ಮಂದಿ ಶಿಷ್ಯರನ್ನು ಹೊರತಾಗಿ ಬೇರ್ಯಾರಿಗೂ ಅವಕಾಶ ನಿರಾಕರಿಸಲಾಗಿತ್ತು. ದಲಾಯಿಲಾಮ ಅವರನ್ನು ಕಾಣಲು ಆಗಮಿಸಿದ್ದ ಅನೇಕ ಬೌದ್ಧ ಧರ್ಮೀಯರು ಭದ್ರತೆ ಕಾರಣದಿಂದ ಪ್ರವಾಸಿ ಮಂದಿರದ ಹೊರ ಆವರಣದಲ್ಲೇ ಉಳಿಯಬೇಕಾಗಿಬಂತು. ದಲಾಯಿ ಲಾಮಾ ಅವರು ಬುಧವಾರ ಮುಂಜಾನೆ ಮುಂಡುಗೋಡಿಗೆ ತೆರಳಲಿದ್ದಾರೆ.