ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಟೋ ಮೀಟರ್ ಅಳವಡಿಕೆಗೆ ಆ.31ರ ಗಡುವು

Lingaraj Badiger
Updated On : 18 Jul 2013, 11:00 am

ಶಿವಮೊಗ್ಗ: ಆಗಸ್ಟ್ 31ರೊಳಗೆ ಜಿಲ್ಲಾದ್ಯಂತ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದವರ ಪರ್ಮಿಟ್ ರದ್ದುಪಡಿಸಲಾಗುವುದು ಹಾಗೂ ಆಟೋ ವಶಕ್ಕೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಆಟೋ ಮಾಲಿಕರ ಹಾಗೂ ಚಾಲಕರ ಸಂಘದ ಸಭೆ ನಡೆಸಿದ ಅವರು, ಆಟೋಗಳಿಗೆ ಮೀಟರ್ ಅಳವಡಿಸಬೇಕು ಎಂಬುದನ್ನು ಹೈಕೋರ್ಟ್ ಕಡ್ಡಾಯಗೊಳಿಸಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಹಿಂದೆಯೇ ಸೂಚನೆ ನೀಡಲಾಗಿತ್ತು. ಅದಾಗ್ಯೂ ಮೀಟರ್ ಅಳವಡಿಸಿಲ್ಲ. ಮುಂದಿನ ಆಗಸ್ಟ್ 31ರೊಳಗೆ ಮೀಟರ್ ಅಳವಡಿಸದಿದ್ದರೆ ಅವರ ಪರ್ಮಿಟಟ್ರದ್ದುಪಡಿಸಿ ಆಟೋಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲೆಯಾದ್ಯಂತ ಸಹಾಯಕ ಸಾರಿಗೆ ಪ್ರದೇಶಿಕ ಕಚೇರಿಗಳ ವ್ಯಾಪ್ತಿಯಲ್ಲೂ ಈ ನಿಯಮ ಏಕ ಪ್ರಕಾರವಾಗಿ ಅನ್ವಯವಾಗಿದ್ದು ಮಲೆನಾಡು, ಬಯಲುಸೀಮೆ ಎಂಬ ಯಾವುದೇ ಪ್ರಶ್ನೆ ಇಲ್ಲ. ಎಲ್ಲರೂ ಕಡ್ಡಾಯವಾಗಿ ಆಗಸ್ಟ್ 31ರೊಳಗೆ ಅಳವಡಿಸಬೇಕು ಎಂದರು.
ಮೀಟರ್ ಅಳವಡಿಕೆ ನಂತರ ಆಯಾ ಸಾರಿಗೆ ಪ್ರದೇಶಿಕ ಕಚೇರಿಗಳಲ್ಲಿ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್, ವಿಮೆ, ಆರ್‌ಸಿ, ಹಾಗೂ ಹೊಗೆ ಪರೀಕ್ಷೆ ದಾಖಲೆಗಳನ್ನು ಸುಸ್ಥಿಯಲ್ಲಿರುವ ಬಗ್ಗೆ ದೃಢೀಕರಣಗೊಳಿಸಿಕೊಳ್ಳಬೇಕು ಎಂದರು.
ಶಿವಮೊಗ್ಗ ನಗರಸಭೆ ವ್ಯಾಪ್ತಿಯಲ್ಲಿ 1500 ಆಟೋ ಮೀಟರ್ ಅಳವಡಿಕೆಗೆ ಮಂಜೂರಾತಿ ಆಗಿದ್ದು ಈ ಪೈಕಿ ಈಗಾಗಲೇ 1440 ಮೀಟರ್‌ಗಳನ್ನು ಅಳವಡಿಸಬೇಕಿದ್ದು ಬಹುತೇಕ ಆಟೋಗಳು ಮೀಟರ್ ಅಳವಡಿಸಿಕೊಂಡಿಲ್ಲ. ಜುಲೈ ತಿಂಗಳಂತ್ಯದೊಳಗೆ ಮೀಟರ್ ಅಳವಡಿಸಿಕೊಳ್ಳುವಂತೆ ಗಡುವು ನೀಡಿದರು.
ಮೀಟರ್ ಅಳವಡಿಸಿಕೊಳ್ಳುವ ಆಟೋಗಳಿಗೆ ಮೀಟರ್ ಮೊತ್ತದಲ್ಲಿ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು. ಇದನ್ನು 2 ಹಂತಗಳಲ್ಲಿ ಮಾತ್ರ ನೀಡಲಾಗುತ್ತಿದ್ದು ನಂತರ ಬರುವವರಿಗೆ ಸಬ್ಸಿಡಿ ಸಿಗುವುದಿಲ್ಲ ಎಂದರು.
ದರ ಪರಿಷ್ಕರಣೆ: ಜಿಲ್ಲಾದ್ಯಂತ ಆಟೋ ಪ್ರಯಾಣ ದರ ಪುನರ್ ವಿಮರ್ಶೆ ಮಾಡಿ ನಿಗದಿ ಮಾಡಲಾಗಿದೆ. ಅದರಂತೆ ಪ್ರತಿ 1.5 ಕಿಮೀ 20 ರುಪಾಯಿ ನಂತರದ ಪ್ರತಿ ಕಿಮೀಗೆ 10, ರಾತ್ರಿ 10ರಿಂದ ಬೆಳಗಿನ 6 ರವರೆಗೆ ಒಂದೂವರೆ ಪ್ರಮಾಣದ ದರವನ್ನು ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರಕುಮಾರ್, ಆರ್‌ಟಿಒ ಕುಬೇರಪ್ಪ, ಎಆರ್‌ಟಿಒ ಧರ್ಮಯ್ಯಗೌಡ, ನಗರಸಭೆ ಆಯುಕ್ತ ಗಣೇಶ್, ನಾಗರಿಕ ವೇದಿಕೆಯ ರವಿಶಂಕರ್ ಹಾಗೂ ತೂಕ ಮತ್ತು ಅಳತೆ ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯೆ
ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆ ಹಾಗೂ ಕನಿಷ್ಠ ದರವನ್ನು ಜಿಲ್ಲಾಡಳಿತ ಕಡ್ಡಾಯ ಮಾಡಿರುವುದು ಒಳ್ಳೆಯದು. ಸಂಘದ ಹೋರಾಟಕ್ಕೆ ಸಿಕ್ಕ ಜಯ. ಈ ಬಗ್ಗೆ ಸಾರಿಗೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾರಕ್ಷಣಾಧಿಕಾರಿಗಳಿಗೆ ಸಂಘದಿಂದ ಅಭಿನಂದನೆ ಸಲ್ಲಿಸಲಾಗುವುದು.
ಎಂ. ಪಾಲಪ್ಪ
ಶಿವಮೊಗ್ಗ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement