ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಫಲಾನುಭವಿಗಳಾಗದೆ ಪಾಲುದಾರರಾಗಿ

Lingaraj Badiger
Updated On : 18 Jul 2013, 10:55 am

ಕ.ಪ್ರ.ವಾರ್ತೆ  ಸೊರಬ  ಜು.17:ನಿಮ್ಮ ಪರಿವರ್ತನೆ, ಜಾಗೃತಿಗಾಗಿ ನಾವು ಬಂದದ್ದೇವೆ, ಸಾಲ ನೀಡುವುದಕ್ಕಲ್ಲ ಎಂದು ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದರು.
 ಬುಧವಾರ ಸಂಜೆ ತಾಲೂಕಿನ ಜಡೆ ಗ್ರಾಮದ ಸಿದ್ಧ ವೃಷಭೇಂದ್ರ ಸಂಸ್ಥಾನ ಜಡೆ ಮಠದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕು ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಲವನ್ನು ಬಂಡವಾಳವನ್ನಾಗಿಸಿ ಆರ್ಥಿಕ ಪ್ರಗತಿಯನ್ನು ಯೋಜನೆಯಲ್ಲಿ ಮನಗಾಣಿಸಲಾಗಿದೆ.
ಸಾಮಾಜಿಕ ಸಾಮರಸ್ಯ: ನೀವು ಫಲಾನುಭವಿಗಳಾಗದೆ ಪಾಲುದಾರರಾಗಬೇಕೆಂಬುದು ಯೋಜನೆಯ ಮಹದುದ್ಧೇಶ, ಇಂದು ನೀವು ತಾಲೂಕಿನಲ್ಲಿ ಉಳಿಸಿದ 10 ರುಪಾಯಿ 6 ಕೋಟಿಯಾಗಿದೆ. ಸಣ್ಣ ಉಳಿತಾಯದಿಂದ ಆರ್ಥಿಕ ಸಬಲತೆ, ಸಾಂಘಿಕ ಬಲ, ಸಾಮಾಜಿಕ ಸಾಮರಸ್ಯ ಮುಂತಾದ ಮಾನವಿಕ ಆವರಣಗಳನ್ನುಳ್ಳ ಅಂತಃಸತ್ವವನ್ನು ತುಂಬುವುದು ಕ್ಷೇತ್ರದ ಧ್ಯೇಯ ಎಂದ ಅವರು ನಾವು ಪ್ರಗತಿಯ ಪಾಲುದಾರರಾಗೋಣ, ನಮ್ಮ ಸೇವೆ, ಶ್ರಮಕ್ಕೆ ಎಂದೂ ಸತ್ವವಿದೆ. ಸದುಪಯೋಗದ ಮೂಲಕ ಯೋಜನೆಯನ್ನು ನಿರಂತರ ಪೋಷಿಸುವಂತಾಗಲಿ ಎಂದರು.
ಸ್ವಾಗತಾರ್ಹ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಧುಬಂಗಾರಪ್ಪ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀಕ್ಷೇತ್ರ ಮಾಡುತ್ತಿರುವುದು ಸ್ವಾಗತಾರ್ಹ, ಯೋಜನೆಯ ಸದುಪಯೋಗದತ್ತ ತಾವು ಎಂದಿಗೂ ಕೈಜೋಡಿಸಲು ಸಿದ್ಧ ಎಂದ ಅವರು ಜನತೆಗೆ ಗಿಡ ಕೊಡುವ ಮೂಲಕ ಶಾಶ್ವತ ಹಸಿರು ಉಳಿಸುವ ಕಾರ್ಯಗಳಾಗಬೇಕಿದೆ ಎಂದರು.
 ಸೊರಬ ಕೇಂದ್ರ ಸಮಿತಿ ನೂತನ ಅಧ್ಯಕ್ಷರಾಗಿ ರಮೇಶ್ ಕುಮಾರ್ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ನಾಗರಾಜಗೌಡ ಹಾಗೂ ಬಾಬುಸಾಬ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಜಡೆ ಸಂಸ್ಥಾನ ಮಠದ ಡಾ. ಮಹಾಂತಶ್ರೀಗಳು ಆಶಿರ್ವಚನ ನೀಡಿದರು. ಶಿಗ್ಗಾಂವ್ ಮಠದ ಶ್ರೀಗಳು ಉಪಸ್ಥಿತರಿದ್ದರು. ಜಿಪಂ ಅಧ್ಯಕ್ಷೆ ಗೀತ ಮಲ್ಲಿಕಾರ್ಜುನ್ಮಾತನಾಡಿದರು.
 ಎಸ್ಕೆಡಿಆರ್‌ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ತಾಪಂ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಜಡೆ ಗ್ರಾಪಂ ಅಧ್ಯಕ್ಷೆ ನಾಗರತ್ನ, ಯೋಜನಾಧಿಕಾರಿ ಎಂ. ಸತೀಶ್, ಜಿಲ್ಲಾ ನಿರ್ದೇಶಕ ಸುಧೀರ್ ಕೆ.ಬಂಟ್ವಾಳ, ಪ್ರಗತಿಬಂಧು, ಸ್ವಸಹಾಯ ಸಂಘಗಳ ಪದಾಧಿಕಾರಿ, ಸದಸ್ಯರು ಹಾಜರಿದ್ದರು.
 ತಾಲೂಕಿನ ಜನತೆ ರಭಸದ ಮಳೆಯ ನಡುವೆಯೂ ಡಾ. ವೀರೇಂದ್ರಹೆಗ್ಗಡೆಯವರನ್ನು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದು, ವೇದಿಕೆ ಆವರಣ ಚಿಕ್ಕದಿದ್ದುದರಿಂದ ತುಸು ನುಗ್ಗಾಟ ಏರ್ಪಟ್ಟಿತ್ತು, ಜಡೆ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದ ಅನೇಕ ಹಳ್ಳಿಗಳವರು ಹೆಗ್ಗಡೆಯವರನ್ನು ಆದರದಿಂದ ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement