ರಂಗೇರಿದ ನೌಕರರ ಸಂಘದ ಚುನಾವಣಾ ಕಣ
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ಚುನಾವಣಾ ಕಣ ರಂಗೇರಿದ್ದು, ಜುಲೈ 22ರಂದು ಚುನಾವಣೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಚುನಾವಣೆ ಕುರಿತ ಮಾಹಿತಿ ನೀಡಿದ ಚುನಾವಣಾಧಿಕಾರಿ ಎಚ್. ಕೊಟ್ರೇಶ್, 22ರಂದು ಬೆಳಿಗ್ಗೆ 11ರಿಂದ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಸಂಜೆ 5ಗಂಟೆಯಿಂದ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದರು.
ಜಿಲ್ಲಾ ಕಾರ್ಯಕಾರಿ ಸಮಿತಿಗೆ ಒಟ್ಟು 59 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು, ಈ ಪೈಕಿ 16 ಇಲಾಖೆಗಳ 17 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಿರುವ 42 ಸ್ಥಾನಗಳ ಚುನಾವಣೆಗೆ 108 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಸ್ಪರ್ಧಿಗಳ ಆಯ್ಕೆಗೆ ಸಂಬಂಧಿಸಿದಂತೆ ನಗರದ ಕೆಇಬಿ ವೃತ್ತದ ಸರ್ಕಾರಿ ನೌಕರರ ಭವನದಲ್ಲಿ ಪ್ರತ್ಯೇಕವಾದ 3 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಉಳಿದ ಇಲಾಖೆಗಳ ಪ್ರತಿನಿಧಿ ಸ್ಥಾನಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಮತದಾನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.
5,261 ನೌಕರ ಮತದಾರರು: ಜಿಲ್ಲೆಯಲ್ಲಿ 25 ಸಾವಿರ ನೋಂದಾಯಿತ ನೌಕರರಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಐಎಎಸ್, ಐಪಿಎಸ್, ಯುಪಿಎಸ್‌ಸಿ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ಹೊರತುಪಡಿಸಿ, ಮಾರ್ಚ್ 20(2013)ರವರೆಗೆ ಸದಸ್ಯತ್ವ ಶುಲ್ಕ ಪಾವತಿಸಿ, ಸದಸ್ಯತ್ವ ಪಡೆದ ಒಟ್ಟು 5,261 ನೌಕರ ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
2ಗಂಟೆಗಳ ಕಾಲ ಅನುಮತಿ: ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಾಗಿರುವ ಸ್ಥಾನಗಳಿಗೆ 22ಅಭ್ಯರ್ಥಿಗಳು ಕಣದಲ್ಲಿದ್ದು, 1,541 ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನದಲ್ಲಿ ಭಾಗವಹಿಸುವ ನೌಕರರ ಅನುಕೂಲಕ್ಕಾಗಿ 22ರಂದು ತಮ್ಮ ಸೇವಾ ಅವಧಿಯಲ್ಲಿ 2ಗಂಟೆಗಳ ಕಾಲ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಅನುಮತಿ ನೀಡಲಾಗಿದೆ ಎಂದ ಅವರು, ಮತದಾನದ ನಂತರ ಅಂದು ಸಂಜೆ ಅದೇ ಮತಗಟ್ಟೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಸಿ, ಫಲಿತಾಂಶ ಪ್ರಕಟಿಸಲಾಗುವುದು ಎಂದರು.
ಈಗಾಗಲೇ ಸಮಿತಿಗೆ 17 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜ್ಯ ಲೆಕ್ಕ ಪತ್ರ ಇಲಾಖೆಯಿಂದ ಸಿ.ಎಸ್. ಷಡಾಕ್ಷರಿ, ಸಹಕಾರ ಇಲಾಖೆಯಿಂದ ನರಸಿಂಹಮೂರ್ತಿ, ಅಬಕಾರಿ ಇಲಾಖೆಯಿಂದ ಹನುಮಂತಪ್ಪ, ಆಯುಷ್ ಇಲಾಖೆಯಿಂದ ಡಾ. ಹಿರೇಮಠ, ಕೈಗಾರಿಕಾ ಇಲಾಖೆಯ ಎಸ್.ವೈ. ರಮೇಶ್, ತಾಂತ್ರಿಕ ಶಿಕ್ಷಣ ಇಲಾಖೆಯ ಟಿ.ಡಿ. ಕೃಷ್ಣಮೂರ್ತಿ, ಸಾರಿಗೆ ಇಲಾಖೆಯ ಮೂರ್ಕಣ್ಣಪ್ಪ, ಸರ್ವೆ ಇಲಾಖೆಯ ಬಿ.ಕೆ. ವೇಣುಗೋಪಾಲ್, ಮುದ್ರಾಂಕ ಇಲಾಖೆಯ ರಂಗಸ್ವಾಮಿ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಡಿ.ಎಂ. ಸದಾನಂದ, ಸರ್ಕಾರಿ ಮುದ್ರಣಾಲಯದಿಂದ ಮುರಳೀಧರ್, ತಾ.ಪಂ. ಬೆಟ್ಟೇಗೌಡ, ತೋಟಗಾರಿಕೆ ಇಲಾಖೆಯ ಲಕ್ಷ್ಮೀಕಾಂತ್, ವಾಣಿಜ್ಯ ತೆರಿಗೆ ಇಲಾಖೆಯ ಬಿ.ಎಂ. ಯಲ್ಲಪ್ಪಗೌಡ, ಗ್ರಂಥಾಲಯ ಇಲಾಖೆಯ ಹವಣ್ಣನವರ್, ಯೋಜನಾ ಮತ್ತು ಸಾಂಖ್ಯಿಕ ಇಲಾಖೆಯ ವರ್ಗಿಸ್ ಆಯ್ಕೆಯಾಗಿದ್ದಾರೆ ಎಂದರು. ಗೋಷ್ಠಿಯಲ್ಲಿ ಕೆ. ಮಂದರಕುಮಾರ್, ರಘುರಾಮ ದೇವಾಡಿಗ, ಷಡಾಕ್ಷರಿ ಹಾಗೂ ಸಂಘದ ಪದಾಧಿಕಾರಿ ಇದ್ದರು.