ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಪಾಯ ಮಟ್ಟ ಮೀರಿದ ತುಂಗೆ

Lingaraj Badiger
Updated On : 19 Jul 2013, 11:32 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.18
ಮಲೆನಾಡು ಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿರುವ ಕಾರಣ ಬುಧವಾರ ಬೆಳಿಗ್ಗೆಯಿಂದ ತುಂಗಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಶಿವಮೊಗ್ಗ - ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನಿಂತಿದೆ.
ಇದರಿಂದಾಗಿ ಬಸ್, ಲಾರಿ ಹೊರತಾಗಿ ಬೇರೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ರಸ್ತೆ ಮೇಲೆ 2  ಅಡಿಯಷ್ಟು ನೀರಿದ್ದ ಕಾರಣ ಕಾರು, ಜೀಪು ಇತ್ಯಾದಿ ಲಘು ವಾಹನಗಳ ಪ್ರವೇಶ ಸಾಧ್ಯವಾಗದಾಯಿತು.
ಬುಧವಾರ ಬೆಳಿಗ್ಗೆ 8 ಗಂಟೆಯ ದಾಖಲೆಯಂತೆ ಹಿಂದಿನ 24 ಗಂಟೆಗಳಲ್ಲಿ ಆಗುಂಬೆಯಲ್ಲಿ 12 ಸೆಂ.ಮೀ.ಮಳೆಯಾಗಿದ್ದರೆ, ತಾಳಗುಪ್ಪ, ತೀರ್ಥಹಳ್ಳಿಯಲ್ಲಿ ತಲಾ 8 ಸೆಂ.ಮೀ., ತ್ಯಾಗರ್ತಿ 6 ಸೆಂ.ಮೀ., ಲಿಂಗನಮಕ್ಕಿಯಲ್ಲಿ 5 ಸೆಂ.ಮೀ.ಮಳೆಯಾಗಿದೆ.
ಸೊರಬದಲ್ಲಿ 4 ಸೆಂ.ಮೀ., ಹುಂಚದಕಟ್ಟೆ, ಆನವಟ್ಟಿ, ಶಿರಾಳಕೊಪ್ಪದಲ್ಲಿ ತಲಾ ಮೂರು, ಅರಸಾಳು, ಶಿಕಾರಿಪುರದಲ್ಲಿ ತಲಾ 2 ಸೆಂ.ಮೀ.ಮಳೆಯಾಗಿದೆ.
ಗಾಜನೂರಿನ ತುಂಗಾ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.


ಸಾಗರದಲ್ಲಿ ಮಳೆ
ಸಾಗರ: ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಬುಧವಾರ ರಾತ್ರಿಯಿಂದ ಬಿರುಸುಗೊಂಡ ಮಳೆ ಬಿಡದಂತೆ ಸುರಿಯುತ್ತಿದೆ.
ಆರಿದ್ರಾ ಮಳೆಯ ನಂತರ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಈಗ ಮತ್ತೆ ತನ್ನ ಆರ್ಭಟ ಮುಂದುವರಿಸಿದೆ. ಧಾರಾಕಾರ ಮಳೆಯಿಂದಾಗಿ ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದೆ. ವರದಾನದಿ ತುಂಬಿ ಹರಿಯುತ್ತಿದ್ದು ತಾಳಗುಪ್ಪ ಹೋಬಳಿಯಲ್ಲಿ ಕೃಷಿ ಭೂಮಿ ಮತ್ತೆ ಜಲಾವೃತವಾಗುವ ಅಪಾಯವಿದೆ. ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿ ಹೋಬಳಿಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು ಲಿಂಗನಮಕ್ಕಿ ಜಲಾಶಯದ ಒಳಹರಿವು ಜಾಸ್ತಿಯಾಗುತ್ತಿದೆ.
ಗೋಡೆ ಕುಸಿತ: ಬಸವನಹೊಳೆ ಜಲಾಶಯ ಭರ್ತಿಯಾಗಿದ್ದು, ಸ್ವಲ್ಪ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಪಟ್ಟಣದ ಗಾಂಧಿನಗರ ಮಂಡಕ್ಕಿಭಟ್ಟಿಯಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಗ್ರಾಮಾಂತರ ಪ್ರದೇಶದಲ್ಲಿ ಅಡಕೆ ತೋಟಗಳಿಗೆ ಕೊಳೆರೋಗ ಬಾಧೆ ಉಲ್ಬಣಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement