ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಡಿತರ ಚೀಟಿ ವ್ಯವಸ್ಥೆ ಸರಿಪಡಿಸಿ

Lingaraj Badiger
Updated On : 19 Jul 2013, 11:33 am

ಕ.ಪ್ರ.ವಾರ್ತೆ, ಶಿಕಾರಿಪುರ,  ಜು.18
ನೂತನ ಪಡಿತರ ಚೀಟಿಗಾಗಿ ಭಾವಚಿತ್ರ ಸಹಿತ ದಾಖಲೆಯನ್ನು ಗಣಕೀಕರಣಗೊಳಿಸಲು ನಿತ್ಯ ಅಲೆದಾಡಿಸುತ್ತಾ ಖಾಸಗಿ ಸಂಸ್ಥೆ ಸತಾಯಿಸುತ್ತಿದ್ದು, ಈ ಕೂಡಲೇ ಸರ್ಕಾರಿ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ವ್ಯವಸ್ಥೆ ಸಮರ್ಪಕಗೊಳಿಸುವಂತೆ ತಾಲೂಕಿನ ಬನ್ನೂರು ಮತ್ತಿತರ ಗ್ರಾಮದ ಜನ ಪಟ್ಟಣದ ತಾಲೂಕು ಕಚೇರಿ ಸಮೀಪದ ಖಾಸಗಿ ಸಂಸ್ಥೆ ಕಚೇರಿ ಬಳಿ ಗುರುವಾರ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಪ್ರತಿಭಟಿಸಿದರು.
ಈ ವೇಳೆ ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಮಾತನಾಡಿ, ತಾಲೂಕಿನ ಸರ್ಕಾರಿ ಅಧಿಕಾರಿಗಳು ಕೇವಲ ನಿರ್ದಿಷ್ಟ ರಾಜಕೀಯ ಪಕ್ಷದ ಏಜೆಂಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಹೊಂದಾಣಿಕೆ ಕೊರತೆ: ಸರ್ಕಾರ ನೂತನ ಪಡಿತರ ಚೀಟಿಯನ್ವಯ ಪ್ರತಿ ಕುಟುಂಬದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಕಚೇರಿಗೆ ಆಗಮಿಸಿ ದಾಖಲೆ ಸಲ್ಲಿಸಬೇಕಾಗಿದ್ದು, ಪಟ್ಟಣದ ಕೆಲ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಯ ಮಧ್ಯೆ ಹೊಂದಾಣಿಕೆ ಕೊರತೆಯಿಂದಾಗಿ ದೂರದ ಕುಟುಂಬದ ಜತೆಗೆ ಆಗಮಿಸುವ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಅಧಿಕಾರಿಗಳ ಏಕಪಕ್ಷೀಯ ತೀರ್ಮಾನದಿಂದ ಬಡವರು ಸಮಸ್ಯೆ ಅನುಭವಿಸುತ್ತಿದ್ದು, ಈ ಬಗ್ಗೆ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ನೀಡಬೇಕಾದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಾಣ ಮೌನವಹಿಸಿದ್ದಾರೆ. ಎಂದ ಅವರು ಅಧಿಕಾರಿಗಳು ತಮ್ಮ ಇಂತಹ ಜನವಿರೋಧಿ ನೀತಿಯನ್ನು ಮುಂದುವರಿಸಿದಲ್ಲಿ ಸರ್ಕಾರದ ಮೂಲಕ ಸೂಕ್ತ ಪಾಠ ಕಲಿಸಬೇಕಾಗಲಿದೆ ಎಂದು ಎಚ್ಚರಿಸಿದರು.
ಕಾಣದ ಶಾಸಕ: ಅಂಜನಾಪುರ ಜಲಾಶಯ ಭರ್ತಿಯಾಗಿ ಹಲವು ದಿನ ಕಳೆದರೂ ಗಂಗಾಪೂಜೆ ಬಾಗಿನ ಸಲ್ಲಿಸಬೇಕಾದ ಕ್ಷೇತ್ರದ ಶಾಸಕರು ಕಣ್ಮರೆಯಾಗಿದ್ದು ಶುಕ್ರವಾರ ಪಕ್ಷದ ವತಿಯಿಂದ ಗಂಗಾ ಮಾತೆಗೆ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.
ಗ್ರಾಮದ ಬಸವರಾಜು ಮಾತನಾಡಿ, ನಿತ್ಯ ಕೇವಲ 4-5 ಕುಟುಂಬದ ದಾಖಲೆ ಮಾತ್ರ ಗಣಕೀಕರಣಗೊಳಿಸುತ್ತಿರುವ ಸಂಸ್ಥೆ ಕಳೆದ ಕೆಲ ದಿನದಿಂದ ಅಲೆಸುತ್ತಿದೆ ಎಂದ ಅವರು ಇದರಿಂದಾಗಿ ಮಕ್ಕಳನ್ನು ಜತೆಯಲ್ಲಿಯೇ ಕರೆದೊಕಂಡು ಬರುತ್ತಿರುವ ಮಹಿಳೆಯರಿಗೆ ವಿಪರೀತ ತೊಂದರೆಯಾಗುತ್ತಿದೆ.  ಸೂಕ್ತ ಮಾಹಿತಿ ನೀಡಿದಲ್ಲಿ ನಿರ್ದಿಷ್ಟ ದಿನದಂದು ನಿರ್ದಿಷ್ಟ ಕುಟುಂಬ ಮಾತ್ರ ಆಗಮಿಸಲಿದೆ ಎಂದು ಹೇಳಿದರು.
ಅಂತರ್ಜಾಲ ಸಮಸ್ಯೆ: ಪಡಿತರ ಚೀಟಿ ಗಣಕೀಕರಣದ ದಾಖಲೆ ವಿಳಂಬಕ್ಕೆ ಹೊಸ ಸಿಬ್ಬಂದಿ ಜತೆಗೆ ವೇಗದ ಅಂತರ್ಜಾಲದ ಬಹು ದೊಡ್ಡ ಸಮಸ್ಯೆ ಕಾರಣವಾಗಿದೆ ಎಂದು ಖಾಸಗಿ ಸಂಸ್ಥೆಯ ಭರತ್ ತಿಳಿಸಿದ್ದು, ತಪ್ಪನ್ನು ತಿದ್ದಿಕೊಂಡು ಶೀಘ್ರ ದಾಖಲೆ ಗಣಕೀಕರಣಕ್ಕೆ ಎಲ್ಲಾ ರೀತಿಯಲ್ಲಿ ಯತ್ನಿಸುವುದಾಗಿ ತಿಳಿಸಿದರು.
ಮುಖಂಡ ಸುರೇಶ್ ಧಾರವಾಡದ, ಶ್ರೀಧರ್, ಗ್ರಾಮದ ನೇಮರಾಜ್, ಭಾಗೀರಥಮ್ಮ, ಸುಶೀಲಮ್ಮ, ನಾಗಮ್ಮ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement