ಸೀಮೆಎಣ್ಣೆ ಕಡಿತ: ವಿತರಕರಿಗೆ ಗೊಂದಲ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.18
ಅನಿಲ ಸಿಲಿಂಡರ್ ರಹಿತ ಪಡಿತರ ಚೀಟಿದಾರರಿಗೆ ವಿತರಿಸುತ್ತಿದ್ದ ಸೀಮೆಎಣ್ಣೆ ಪ್ರಮಾಣದಲ್ಲಿ ಕಡಿತ ಮಾಡಿರುವುದರಿಂದ ವಿತರಕರಿಗೆ ಗೊಂದಲ ಉಂಟಾಗಿದೆ. ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಚಿಲ್ಲರೆ ಸೀಮೆಎಣ್ಣೆ ವ್ಯಾಪಾರಿಗಳ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಸಂಘದ ಸದಸ್ಯರು ತಮ್ಮ ಅಳಲನ್ನು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಬಳಿ ತೊಡಿಕೊಂಡರು.
ನಗರದಲ್ಲಿ 74,314 ಪಡಿತರ ಚೀಟಿದಾರರಿದ್ದಾರೆ. ಇದರಲ್ಲಿ 28.600 ಪಡಿತರ ಚೀಟಿದಾರರು ಗ್ಯಾಸ್ ಸಂಪರ್ಕ ಹೊಂದಿದ್ದು, ಸೀಮೆಎಣ್ಣೆ ನೀಡುವುದಿಲ್ಲ. ಉಳಿದ 45,714 ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿದೆ. ಆದರೆ, ಜುಲೈ ತಿಂಗಳಲ್ಲಿ 27,591 ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ನೀಡಲಾಗುತ್ತಿದ್ದು, 18,323 ಚೀಟಿದಾರರಿಗೆ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸೂಕ್ತ ಮಾಹಿತಿಬೇಕು. ಇದರಿಂದ ಸೀಮೆಎಣ್ಣೆ ವಿತರಣೆ ಮಾಡಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಬೇಸರ: ಸರ್ಕಾರ ಯಾವುದೇ ಸೂಚನೆ ನೀಡದೆ ಏಕಾಏಕಿ ಸೀಮೆಎಣ್ಣೆ ಕಡಿತ ಮಾಡಿರುವುದರಿಂದ ವಿತರಕರಲ್ಲಿ ಗೊಂದಲ ಉಂಟಾಗಿದೆ. ಅಲ್ಲದೇ ಪಡಿತರದಾರರು ಕೂಡ ಈ ಹಿಂದಿನಂತೆ ಸೀಮೆಎಣ್ಣೆ ವಿತರಿಸುವಂತೆ ಒತ್ತಾಯಿಸುತ್ತಿದ್ದು, ವಾದ ಮಾಡುತ್ತಿದ್ದಾರೆ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಯಾವ ಪಡಿತರದಾರರಿಗೆ ಸೀಮೆಎಣ್ಣೆ ವಿತರಣೆ ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಸ್ಥಳೀಯ ಅಧಿಕಾರಿಗಳು ಯಾವ ಪಡಿತರಿಗೆ ಸೀಮೆಎಣ್ಣೆ ವಿತರಿಸಬೇಕು ಎಂದು ಕೂಡಲೇ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಡಳಿತವನ್ನು ಸದಸ್ಯರು ಆಗ್ರಹಿಸಿದ್ದಾರೆ.
ಈ ವೇಳೆ ಸಂಘಧ ಅಧ್ಯಕ್ಷ ವಡಿವೇಲು, ಉಪಾಧ್ಯಕ್ಷ ಗಂಗಭೈರಯ್ಯ, ಕಾರ್ಯದರ್ಶಿ ಆರ್. ಕುಮಾರ್, ಖಜಾಂಚಿ ಗಂಗಣ್ಣ, ಸದಸ್ಯ ಬೋರೇಗೌಡ, ರಮೇಶ್ ಮತ್ತು ರವಿ ಇದ್ದರು.