ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಳೆಹುಲಿಗೆ ಜಿಲ್ಲಾಧ್ಯಕ್ಷ ಪಟ್ಟ

Lingaraj Badiger
Updated On : 19 Jul 2013, 11:25 am

ಕ.ಪ್ರ.ವಾರ್ತೆ  ಶಿವಮೊಗ್ಗ  ಜು.18
 ತನ್ನ ಭದ್ರಕೋಟೆಯಲ್ಲೇ ಬಿಜೆಪಿಯನ್ನು ಮೇಲೆತ್ತಿನಿಲ್ಲಿಸಲು ಆ ಪಕ್ಷದ ಮುಖಂಡರು ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಸಮರ್ಥ ನಾಯಕರ ಹೆಗಲಿಗೆ ಜಿಲ್ಲಾಧ್ಯಕ್ಷ ಸ್ಥಾನದ ನೊಗ ಹೊರಿಸಲು ವೇದಿಕೆ ಸಜ್ಜುಮಾಡಿದ್ದಾರೆ. ಜುಲೈ 20ರಂದು ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯಲಿದ್ದು, ದೊಡ್ಡ ಸವಾಲಿನೊಂದಿಗೆ ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸಲಿದ್ದಾರೆ.
 ಹಾಲಿ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ ಅವರ ಸ್ಥಾನಕ್ಕೆ ಪರಿಪಕ್ವ ನಾಯಕನನ್ನು ಕೂರಿಸುವ ನಿಟ್ಟಿನಲ್ಲಿ ಅಳೆದುಹೊಯ್ದು ಅಂತಿಮವಾಗಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅಥವಾ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರು ಅಂತಿಮ ಗೊಳಿಸಲಾಗಿದೆ.
ಎಸ್.ದತ್ತಾತ್ರಿ ಸಾಧ್ಯತೆ ಕ್ಷೀಣ: ತಾಲೂಕು ಘಟಕಗಳ ಪುನರ್ ರಚನೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷಗಾದಿಗೆ ಮುಂಚೂಣಿಯಲ್ಲಿ ಕೇಳಿಬಂದ ಹೆಸರು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ. ನಂತರ ನಡೆದ ಬೆಳವಣಿಗೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಚನ್ನಬಸಪ್ಪ ಅವರ ಹೆಸರು ತೇಲಿಬಂತು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆತ್ಮೀಯ ಬಳಗದಲ್ಲಿರುವ ಚನ್ನಬಸಪ್ಪ ಅವರು ಅಧ್ಯಕ್ಷರಾಗುತ್ತಾರೆಂದೇ ಪಕ್ಷದೊಳಗೆ ಮಾತು ಕೇಳಿಬಂದಿತ್ತು.
 ಹೊಸಬರನ್ನು ಮುಂಚೂಣಿಗೆ ತರುವ ಉದ್ದೇಶದಿಂದ ಅಧ್ಯಕ್ಷ ಜವಾಬ್ದಾರಿಯನ್ನು ದತ್ತಾತ್ರಿ ಅಥವಾ ಚನ್ನಬಸಪ್ಪನವರಿಗೆ ನೀಡುವ ಬಗ್ಗೆ ಪಕ್ಷದೊಳಗೆ ಒಲವು ವ್ಯಕ್ತವಾಗಿತ್ತು. ಆದರೆ, ಭವಿಷ್ಯದ ದೃಷ್ಟಿಯಿಂದ, ನಡೆಯಬಹುದಾದ ರಾಜಕೀಯ ವಿಪ್ಲವಗಳ ಮುನ್ಸೂಚನೆ ಅರಿತು ಸಂಘಟನೆ ದಿಢೀರ್ ಕೆಲವು ನಿರ್ಧಾರ ತೆಗೆದುಕೊಂಡು ಹಳೇ ಹುಲಿಗಳಿಗೆ ಜಿಲ್ಲಾ ನೇತೃತ್ವ ಕೊಡಲು ಆಸಕ್ತಿತೋರಿತು.
 ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲಲೂ ಸಾಧ್ಯವಾಗಿಲ್ಲ.
 ಹೀಗೆ ಸೋಲೊಪ್ಪಿಕೊಂಡ ಮೂಲೆ ಸೇರಿರುವಾಗ ಫಿನೀಕ್ಸ್‌ನಂತೆ ಮತ್ತೆ ಮೇಲೆದ್ದು ಬರಲು ಮುಂಬರುವ ಲೋಕಸಭಾ ಚುನಾವಣೆಯೇ ಒಂದು ಪ್ರಬಲ ಅವಕಾಶ.
   ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಎಲ್ಲರನ್ನೂ ಕೂಡಿಸಿಕೊಂಡು ಹೋಗುವ ಜವಾಬ್ದಾರಿ ಇರುವ ಜಿಲ್ಲಾಧ್ಯಕ್ಷ ಹುದ್ದೆಗೆ ಸೂಕ್ತವಾದವರನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ನಿಲುವು ಬದಲಿಸಿಕೊಳ್ಳಲಾಯಿತು ಎಂದು ಪಕ್ಷದ ಹಿರಿಯ ಮುಖಂಡರು ಅಭಿಪ್ರಾಯಪಡುತ್ತಾರೆ.
ಸದ್ಯ ಬಿಜೆಪಿ ಎದುರು ಇದ್ದಿದ್ದು ಎರಡು ಆಯ್ಕೆ. ತೀರ್ಥಹಳ್ಳಿಯ ಮಾಜಿ ಶಾಸಕ ಆರಗ ಜ್ಞಾನೇಂದ್ರರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವುದು. ಇಲ್ಲವೇ ಆಯನೂರು ಮಂಜುನಾಥ್ ಅವರನ್ನು ಆಯ್ಕೆ ಮಾಡುವುದು.
 ಅಂತಿಮವಾಗಿ ಪಕ್ಷದೊಳಗೆ ಆಯನೂರು ಮಂಜುನಾಥ್ ಸೂಕ್ತ ಎಂಬ ಅಭಿಪ್ರಾಯವ್ಯಕ್ತವಾಗಿದೆ. ಈಗಾಗಲೇ 2000ನೇ ಇಸವಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಬೆಳೆದು ಹಾಲಿ ರಾಜ್ಯ ವಕ್ತಾರರಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಜಿಲ್ಲೆಯ ಪ್ರಬಲ ಕೋಮಿಗೆ ಸೇರಿದವರಾಗಿರುವುದು ಮಾತ್ರವಲ್ಲದೆ
, ಉತ್ತಮ ವಾಗ್ಮಿ ಕೂಡ ಹೌದು. ಎರಡು ಬಾರಿ ಲೋಕಸಭಾ ಚುನಾವಣೆಯ ಹುರಿಯಾಳು. ಜಿಲ್ಲೆಯ ನಾಡಿಮಿಡಿತವನ್ನು ಇಂಚಿಂಚು ಅರಿತವರು.
   ಹೀಗಾಗಿ ಅವರೇ ಸೂಕ್ತ ವ್ಯಕ್ತಿ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಆಯನೂರ್‌ಗೆ ಮಣೆ: ಇದೆಲ್ಲಕ್ಕಿಂತ ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳುವ ಸಾದ್ಯತೆ ಇರುವುದರಿಂದ ಭವಿಷ್ಯದ ದಿನಗಳಲ್ಲಿ ಪಕ್ಷದೊಳಗಿನ ಪರಿಸ್ಥಿತಿಯನ್ನು ನಿಭಾಯಿಸಲು ಆಯನೂರು ಮಂಜುನಾಥ್ ಅವರೇ ಸೂಕ್ತ ಎಂಬ ಅಭಿಪ್ರಾಯವೂ ಇದೆ.
   ಅದೇ ರೀತಿ ಆರಗ ಜ್ಞಾನೇಂದ್ರರನ್ನು ಪಕ್ಷದ ರಾಜ್ಯ ಘಟಕದಲ್ಲಿ ಬಳಸಿಕೊಳ್ಳಲೂ ಉದ್ದೇಶಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
  ಸದ್ಯ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಿಜೆಪಿ ರಾಜ್ಯ ಘಟಕ. ಹಳೇ ಹುಲಿಗಳಿಗೆ ಮಣೆ ಹಾಕಿದರೆ ಆಯನೂರು ಮಂಜುನಾಥ್ ಅಥವಾ ಆರಗ ಜ್ಞಾನೇಂದ್ರ ಅಧ್ಯಕ್ಷರಾಗುತ್ತಾರೆ,
 ಯುವ ನೇತೃತ್ವ ಒಳಿತೆಂದರೆ ಎಸ್.ದತ್ತಾತ್ರಿಗೆ ಹೊಣೆಗಾರಿಕೆ ವಹಿಸಲಾಗುತ್ತದೆ. ಅಂತಿಮವಾಗಿ ಗುರುವಾರ ಸಂಜೆಯೊಳಗೆ ಸ್ಪಷ್ಟ ಚಿತ್ರಣ ಹೊರಬರಲಿದೆ.
-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement