20 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇ-ಯಂತ್ರ
ಶಿವಮೊಗ್ಗ: ರಾಜ್ಯದಲ್ಲಿ ಆಯ್ದ 20 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇ-ಯಂತ್ರ ಅಳವಡಿಸುವ ಉದ್ದೇಶವನ್ನು ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹೊಂದಿದೆ ಎಂದು ಐಐಟಿಯ ಸಂಸ್ಥೆಯ ಇ-ಯಂತ್ರ ಪ್ರಾಜೆಕ್ಟ್ನ ಕಾರ್ಯಕ್ರಮ ಸಂಯೋಜಕಿ ಸರಸ್ವತಿ ಕೃತಿ ವಾಸನ್ ತಿಳಿಸಿದರು.
ನಗರದ ಜವಾಹರ್ಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯದ ವಿವಿಧ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಪ್ರಾತ್ಯಾಕ್ಷಿಕೆ ಮೂಲಕ ಮಾಹಿತಿ ನೀಡಿ ಅವರು ಮಾತನಾಡಿ, ಪ್ರತಿ ರಾಜ್ಯದಲ್ಲಿ 20 ಎಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಿ, ಅಲ್ಲಿನ ಶಿಕ್ಷಕರಿಗೆ ತಂತ್ರಜ್ಞಾನದ ಕುರಿತು ತರಬೇತಿ ನೀಡಲಾಗುತ್ತದೆ. ಒಟ್ಟಾಗಿ ಎಲ್ಲಾ ಶಿಕ್ಷಕರಿಗೂ ತರಬೇತಿ ನೀಡಲು ಸಾಧ್ಯವಿಲ್ಲದರಿಂದ 5 ನೋಡಲ್ ಸೆಂಟರ್ಗಳನ್ನು ಸ್ಥಾಪಿಸಿ ತರಬೇತಿ ನೀಡಲಾಗುವುದು ಎಂದರು.
ಆಯ್ಕೆಯಾದ ಪ್ರತಿ ಕಾಲೇಜಿಗೂ ಒಂದೊಂದು ಇ-ಯಂತ್ರದ ರೋಬೊಟಿಕ್ಸ್ ಮಾದರಿಯನ್ನು ನೀಡಲಾಗುವುದು. ಇದಕ್ಕೆ ಆಯಾ ಕಾಲೇಜುಗಳೇ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಬೇಕು. ಏಕೆಂದರೆ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಬರುತ್ತಿರುವ ಆರ್ಥಿಕ ಸಹಾಯ ನಮ್ಮ ಸಂಸ್ಥೆಗೆ ಸಕಾಗುತ್ತಿಲ್ಲ. ಆದ್ದರಿಂದ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ಬಯಸುವ ಕಾಲೇಜುಗಳು ಇ-ಯಂತ್ರ ಲ್ಯಾಬ್ನ್ನು ಸ್ಥಾಪಿಸಿಕೊಂಡು, ಶಿಕ್ಷಕರನ್ನು ತರಬೇತಿಗೆ ಕಳುಹಿಸಬಹುದು ಎಂದರು.
ಐಐಟಿ ಸಂಸ್ಥೆಯ ನೂತನ ಹೊಸ ಪ್ರಾಜೆಕ್ಟ್ ಇ-ಯಂತ್ರ ಮುಂದಿನ ಶೈಕ್ಷಣಿಕ ದೃಷ್ಟಿಯಿಂದ ಉತ್ತಮ ಸಾಧನವಾಗಿದೆ. ಈ ಯಂತ್ರದ ಮೂಲಕ ಅಧುನಿಕ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡಬಹುದು. ಅಲ್ಲದೇ ಪರಿಣಾಮಕಾರಿ ಬೋಧನೆಗೆ, ಭವಿಷ್ಯದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುಲು ಈ ಯಂತ್ರವನ್ನು ಬಳಸಿಕೊಳ್ಳಬಹುದು ಎಂದರು.
ಇಂದು ಅಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಹೆಚ್ಚಿದ್ದು, ಶಿಕ್ಷಕರಿಗಿಂತ ಹೆಚ್ಚು ವಿದ್ಯಾರ್ಥಿಗಳೆ ಮೊಬೈಲ್ ಬಳಕೆ ಮಾಡಿಕೊಂಡು ತಂತ್ರಜ್ಞಾನದ ಕುರಿತು ತಿಳಿದುಕೊಳ್ಳುತ್ತಿದ್ದಾರೆ ಹಾಗೂ ಇಂತಹ ಅಧುನಿಕ ತಂತ್ರಜ್ಞಾನಗಳನ್ನು ತಿಳಿದುಕೊಳ್ಳುವ ಕುತೂಹಲವು ಇದೆ. ಆದರೆ, ಶಿಕ್ಷಕರಲ್ಲಿಯೇ ಈ ಕುರಿತು ಮಾಹಿತಿ ಕಡಿಮೆ ಇದೆ.
ಆದ್ದರಿಂದ ಮೊದಲು ಶಿಕ್ಷಕರಿಗೆ ಇ-ಯಂತ್ರದ ಕುರಿತು ಮಾಹಿತಿ ನೀಡಿ, ನಂತರ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಕಾರ್ಯಯೋಜನೆ: ಮೊದಲು ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡುವುದು. 2ನೇ ಹಂತವಾಗಿ ಆಯ್ದ ಕಾಲೇಜಿನಲ್ಲಿ ಇ-ಯಂತ್ರದ ಲ್ಯಾಬ್ ಸ್ಥಾಪನೆ ಮಾಡಿಸುವುದು. 3ನೇ ಹಂತವಾಗಿ ಕಾರ್ಯಾಗಾರದ ಮೂಲಕ ಶಿಕ್ಷಕರಿಗೆ ಮಾಹಿತಿ ನೀಡುವುದು. 4ನೇ ಹಂತವಾಗಿ ಇ-ಯಂತ್ರ ಅಳವಡಿಸಿ, ಹಲವಾರು ಸ್ಪರ್ಧೆಗಳ ಮೂಲಕ ಶಿಕ್ಷಕರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡುವುದು.
ಕೊನೆಯ ಹಂತವಾಗಿ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿ, ತಂತ್ರಜ್ಞಾನವನ್ನು ಕಾಲೇಜಿನಲ್ಲಿ ಅನುಷ್ಠಾನಕ್ಕೆ ತರುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯ 20ಹೆಚ್ಚು ಕಾಲೇಜಿನ ಪ್ರಾಂಶುಪಾಲರು ಹಾಗು ವಿಭಾಗದ ಮುಖ್ಯಸ್ಥರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಜೆಎನ್ಎನ್ಸಿಇ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸರಾವ್ ಕುಂಟೆ, ಡಾ.ಕೆ. ಕೃಷ್ಣಮೂರ್ತಿ ಇದ್ದರು.