ಇಂದು ಉದ್ಘಾಟನೆ
ಸಾಗರ: ಬಿಪಿಎಲ್ ಪಡಿತರದಾರರಿಗೆ 1 ದರದಲ್ಲಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯ ಉದ್ಘಾಟನಾ ಕಾರ್ಯಕ್ರಮವು ಜು.20ರ ಶನಿವಾರ ಬೆಳಿಗ್ಗೆ 10-30ಕ್ಕೆ ಪಟ್ಟಣದ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಸಭಾಗಣಹದಲ್ಲಿ ನಡೆಯಲಿದೆ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದು, ವಿಧಾನಪರಿಷತ್ ಸಭಾಪತಿ ಶಂಕರಮೂರ್ತಿ, ಸಚಿವ ಕಿಮ್ಮನೆ ರತ್ನಾಕರ್, ಸಂಸದ ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಮಧು ಬಂಗಾರಪ್ಪ, ವಿಪ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಿದ್ದರಾಮಣ್ಣ, ಭಾರತಿ ಶೆಟ್ಟಿ ಪಾಲ್ಗೊಳ್ಳುವರು.
ಚಿನ್ನದ ಪದಕ ಪ್ರದಾನ
ಸಾಗರ: ತಾಲೂಕಿನ ತಲನೀರು ಗ್ರಾಮದ ಗಣೇಶಚಂದ್ರ ಟಿ.ಎಂ. ಅವರು ಮೈಸೂರು ವಿಶ್ವವಿದ್ಯಾಲಯದ ಎಂ.ಎ. ತತ್ವಶಾಸ್ತ್ರದಲ್ಲಿ ಮೂರು ಚಿನ್ನದ ಪದಕ ಪಡೆದಿದ್ದು. ಈಚೆಗೆ ನಡೆದ ಮೈಸೂರು ವಿ.ವಿ. 93ನೇ ಘಟಿಕೋತ್ಸವದಲ್ಲಿ ಪದಕ ಪ್ರದಾನ ಮಾಡಲಾಯಿತು. ಗಣೇಶಚಂದ್ರ ಅವರು ಸಾಗರದಲ್ಲಿ ಪಿಯುಸಿ ಶಿಕ್ಷಣ ಪಡೆದು, ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಪದವಿ ಗಳಿಸಿ, ಮೈಸೂರು ಮಾನಸ ಗಂಗೋತ್ರಿ ಕಾಲೇಜಿನಲ್ಲಿ ತತ್ವಶಾಸ್ತ್ರ ಎಂಎ ಪದವಿ ಪಡೆದಿರುತ್ತಾರೆ.
ಬಿರುಸಾದ ಮಳೆ; ಚುರುಕಾದ ಕೃಷಿ ಚಟುವಟಿಕೆ
ಸೊರಬ: ತಾಲೂಕಿನಲ್ಲಿ ಪುನರ್ವಸು ಮಳೆ ಉತ್ತಮವಾಗಿ ಬೀಳುತ್ತಿದ್ದು, ಕೃಷಿ ಚಟುವಟಿಕೆಗೆ ಉತ್ಸಾಹ ತಂದಿದೆ. ಪ್ರಸಕ್ತ ವರ್ಷ ಜೂನ್ ಆರಂಭದಿಂದಲೆ ಮುಂಗಾರು ಉತ್ತಮ ಪ್ರವೇಶವಾಗಿದ್ದರಿಂದ ಬಿತ್ತನೆಗೆ ಸಜ್ಜಾಗಿದ್ದ ಕೃಷಿಕರು ಬಿತ್ನನೆ ಕಾರ್ಯ ನಡೆಸಿದ್ದರು, ನಂತರ ಮಳೆ ಹಿಂದೆ ಸರಿದಿದ್ದರಿಂದ ಹಾಗೂ ಆರಿದ್ರಾ ಮಳೆಯ ಆರ್ಭಟ ಹೆಚ್ಚಾಗಿದ್ದರಿಂದ ಬಿತ್ತನೆಯಾಗಿದ್ದ ಪೈರು ಬಹುತೇಕ ನಾಶಗೊಂಡಿತ್ತು. ಈಗ ಬತ್ತದ ಬೆಳೆಗೆ ಅಗೆಸಸಿ ತಯಾರಾಗಿದ್ದು, ನಾಟಿ ಕಾರ್ಯ ಆರಂಭಗೊಂಡಿದೆ. ಮಳೆಯ ವೈಪರೀತ್ಯದಿಂದಾಗಿ ವಾಣಿಜ್ಯ ಬೆಳೆಗಳಾದ ಶುಂಠಿ, ಅಡಕೆ ಅತಂತ್ರ ಸ್ಥಿತಿಯಲ್ಲಿದೆ. ಜೋಳದ ಬೆಳೆ ಸಂಕಷ್ಟದಲ್ಲಿದ್ದು, ುಳೆ ರಭಸ ಹೆಚ್ಚಾದಲ್ಲಿ ನಿರೀಕ್ಷಿತ ಬೆಳೆ ತೆಗೆಯುವುದು ಕಷ್ಟದಾಯಕವಾಗಿದೆ. ಅಡಕೆ ಬೆಳೆಗೆ ತಗಲುವ ಕೊಳೆ ರೋಗ ನಿಯಂತ್ರಣಕ್ಕೆ ಬಾರದೆ ಉದುರುತ್ತಿದ್ದು, ಕೊಳೆ ಔಷಧಿ ಸಿಂಪಡನೆಗೂ ಮಳೆ ಸಮರ್ಪಕ ವಾತಾವರಣ ನೀಡದ ಕಾರಣ ಅಡಕೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.