ಐಟಿ ದಾಳಿ: ರಾಜಕೀಯ ಪ್ರೇರಿತ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.19
ಬೆಂಗಳೂರು ಆದಿಚುಂಚನಗಿರಿ ಶಾಖಾಮಠದ ಮೇಲೆ ಐಟಿ ದಾಳಿ ನಡೆಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ. ತಮ್ಮ ವಿರುದ್ಧವಾಗಿರುವ ಸಮುದಾಯವನ್ನು ಹಣಿಯುವ ಪ್ರಯತ್ನ ಇದು ಎಂದು ಹೇಳಿದೆ.
ಪಕ್ಷದ ರಾಜ್ಯ ವಕ್ತಾರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎನ್ನುವುದಾದರೆ ಅಲ್ಪಸಂಖ್ಯಾತ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರೂ ಆ ಧಾರ್ಮಿಕ ಕೇಂದ್ರಗಳ ಮೇಲೆ ಕೇಂದ್ರ ಸರ್ಕಾರ ಏಕೆ ದಾಳಿ ನಡೆಸಿಲ್ಲ ಎಂದು ಪ್ರಶ್ನಿಸಿದರು. ಎಲ್ಲಾ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವ ಧೈರ್ಯವನ್ನು ಕೇಂದ್ರ ಸರ್ಕಾರ ತೋರಿಸಲಿ. ಆಯ್ದ ಸಮುದಾಯಗಳ ಮೇಲೆ ಮಾತ್ರ ದಾಳಿ ನಡೆಸುವ ಪ್ರಯತ್ನ ಸರಿ ಅಲ್ಲ ಎಂದರು.
ಇದು ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತರನ್ನು ಒಡೆಯುವ ಪ್ರಯತ್ನ. ಇಂತಹ ದಾಳಿಗಳನ್ನು ಕೂಡಲೇ ನಿಲ್ಲಸಬೇಕು ಎಂದು ಆಯನೂರು ಮಂಜುನಾಥ್ ಒತ್ತಾಯಿಸಿದರು. ಇಲ್ಲದಿದ್ದರೆ ಮಸೀದಿ, ಚರ್ಚ್‌ಗಳ ಮೇಲೆಯೂ ದಾಳಿ ನಡೆಸಿ ಎಂದು ಆಗ್ರಹಿಸಿದರು.
ಅಮಾನತ್ ಪ್ರಸ್ತಾವ: ವರಮಾನದ ಪ್ರಶ್ನೆಯೇ ಮುಖ್ಯವಾಗಿದ್ದರೆ ಕೇಂದ್ರ ಸಚಿವರ ನೇತೃತ್ವದ ಅಮಾನತ್ ಬ್ಯಾಂಕ್ ಬಿಲ್ಡರ್‌ಗಳ ಜತೆ ಶಾಮೀಲಾಗಿ ಅವ್ಯವಹಾರ ನಡೆಸಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಹಾಗಾದರೆ ಕಾಂಗ್ರೆಸ್ ಸರ್ಕಾರ ಎಲ್ಲ ಅಲ್ಪಸಂಖ್ಯಾತ ಸಂಸ್ಥೆಗಳು ಪ್ರಾಮಾಣಿಕವಾಗಿವೆ ಎಂದು ಘೋಷಿಸಲಿ ಎಂದು ಟೀಕಿಸಿದರು.
ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿ ಮಾಡಿ, ಜನರು ಉದ್ರೇಕಗೊಂಡು ಗಲಾಟೆ ಮಾಡಿದರೆ ಅದರ ಲಾಭ ಪಡೆಯುವ ಹುನ್ನಾರ ಐಟಿ ದಾಳಿಯ ಹಿಂದೆ ಇದೆ. ಅಲ್ಲದೇ ತಮ್ಮ ವಿರುದ್ಧ ನಿಂತರೆ ಯಾವ ಕ್ರಮ ಬೇಕಾದರೂ ಕೈಗೊಳ್ಳುತ್ತೇವೆ ಎಂದು ತೋರಿಸುವ ಪ್ರಯತ್ನ ಇದು ಎಂದರು.
ಶಿಕ್ಷಣ ಕೇಂದ್ರಗಳ ಮೇಲೆ ದಾಳಿ ನಡೆಸುವುದನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸುವುದು ಸರಿ ಅಲ್ಲ. ಆದಿಚುಂಚನಗಿರಿ ಮಠ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರೆ ಆ ಕಚೇರಿ ಮಠದ ಒಳಗೆ ಇತ್ತೇ ಇಲ್ಲದಿದ್ದರೆ ದಾಳಿ ನಡೆಸಿದ್ದು ಏಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ಗೆ ಈಗ ಮೋದಿ ಭಯ ಕಾಡುತ್ತಿದೆ. ಅವರ ಪ್ರತಿಯೊಂದು ಹೇಳಿಕೆಯಲ್ಲಿಯೂ ಅಲ್ಪಸಂಖ್ಯಾತರ ವಿರುದ್ಧದ ಅಂಶಗಳನ್ನು ಹುಡುಕುತ್ತಿದೆ ಎಂದ ಅವರು, ಮಠಗಳ ಮೇಲೆ ದಾಳಿ ನಡೆಸುವುದನ್ನು ಕೈಬಿಡದಿದ್ದರೆ ಪಕ್ಷ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ, ಎನ್.ಜೆ. ರಾಜಶೇಖರ್, ಬಸವರಾಜಪ್ಪ, ಬಾ.ರಾ. ಮಧುಸೂದನ್ ಇದ್ದರು.
ಬಿಎಸ್‌ವೈ ಸೇರ್ಪಡೆಗೆ ವಿರೋಧವಿಲ್ಲ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ರಾಷ್ಟ್ರೀಯ ಮುಖಂಡರು ತೀರ್ಮಾನಿಸಿದರೆ ಜಿಲ್ಲೆಯ ಯಾವ ಮುಖಂಡರು ಅದನ್ನು ವಿರೋಧಿಸುವ ಧೈರ್ಯ ಮಾಡುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಯಡಿಯೂರಪ್ಪ ಅವರೂ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಕೆಲವು ಸಲ ಅವರಲ್ಲಿ ಗೊಂದಲವೂ ಕಂಡಿದೆ. ರಾಜ್ಯದ ಕೆಲವು ಮುಖಂಡರು ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ. ಎಲ್ಲವೂ ಪರಿಹಾರವಾಗಿ, ಅವರು ಸೇರುವುದಕ್ಕೆ ವರಿಷ್ಠರು ಒಪ್ಪಿಗೆ ಕೊಟ್ಟರೆ ನಮ್ಮದೂ ಒಪ್ಪಿಗೆ ಎಂದರು.
ಒಕ್ಕಲಿಗರ ಸಂಘ ಖಂಡನೆ
ಸಾವಿರಾರು ವರ್ಷಗಳ ಇತಿಹಾಸ ಇರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವುದನ್ನು ಜಿಲ್ಲಾ ಒಕ್ಕಲಿಗರ ಸಂಘ ಖಂಡಿಸಿದೆ.
ಶ್ರೀಮಠವು ಕೇವಲ ಒಕ್ಕಲಿಗರಿಗೆ ಮಾತ್ರವಲ್ಲದೆ ನಾಡಿನ ಸಮಸ್ತ ಜನಾಂಗಕ್ಕೂ ಸಹಕಾರ ನೀಡುವುದರೊಂದಿಗೆ ತನ್ನದೇ ಪ್ರತಿಷ್ಠೆಯನ್ನು ಬೆಳೆಸಿಕೊಂಡಿದೆ. ಶಿಕ್ಷಣ ದಾಸೋಹ, ಅನ್ನದಾಸೋಹ, ಆರೋಗ್ಯ ದಾಸೋಹ, ಹಸಿರೀಕರಣ ಯೋಜನೆಗಳಂತಹ ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯನಿರ್ವಹಿಸುತ್ತಿದೆ. ಆದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಂಸ್ಥೆ ಮೇಲೆ ಏಕಾಏಕಿ ದಾಳಿ ಮಾಡಿರುವುದರಿಂದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ.
ಈ ದಾಳಿಯಿಂದ ಒಕ್ಕಲಿಗ ಸಮುದಾಯ ಮಾತ್ರವಲ್ಲ. ಎಲ್ಲಾ ಜನಾಂಗದವರನ್ನು ಕೆರಳಿಸಿದೆ. ಇದು ರಾಜಕೀಯ ಪಿತೂರಿ ಇರಬಹುದು ಎಂದು ಸಂಘದ ಅಧ್ಯಕ್ಷ ಪ್ರೊ. ಜೆ.ಎಲ್. ಪದ್ಮನಾಭ್ ತಿಳಿಸಿದ್ದಾರೆ.
ಮಠದ ಗೌರವಕ್ಕೆ ಧಕ್ಕೆ ತಂದಿದೆ
ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಮಠದ ಮೇಲೆ ಐಟಿ ದಾಳಿ ನಡೆಸಿರುವುದನ್ನು ರಾಜ್ಯ ಒಕ್ಕಲಿಗರ ಜಾಗೃತ ಹೋರಾಟ ವೇದಿಕೆ ಖಂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆದ ನಂತರ ರಾಜ್ಯದ ಜನರ ಹಿತ ಕಾಪಾಡುವ ಕೆಲಸ ಮಾಡುವುದನ್ನು ಬಿಟ್ಟು ರಾಜ್ಯಕ್ಕೆ ಮಾರಕವಾಗುವಂತಹ ಕಾರ್ಯಕ್ರಮಗಳನ್ನು ನೀಡುತ್ತ ತಮ್ಮನ್ನು ಬೆಳೆಸಿದ ಸಮುದಾಯದ ವಿರುದ್ಧ ನಡೆಯುತ್ತಿರುವುದನ್ನು ವೇದಿಕೆ ಖಂಡಿಸಿದೆ ಎಂದು ವೇದಿಕೆಯ ರಾಜಾಧ್ಯಕ್ಷ ಗುಡೇಮಾರನಹಳ್ಳಿ ತಿಮ್ಮಯ್ಯ, ಜಿಲ್ಲಾಧ್ಯಕ್ಷ ಗೋವಿಂದಪ್ಪ ತಿಳಿಸಿದ್ದಾರೆ.
ಸೇಡಿನ ರಾಜಕಾರಣ
ಭದ್ರಾವತಿ: ಧಾರ್ಮಿಕ ಪರಂಪರೆಯುಳ್ಳ ಶ್ರೀ ಆದಿಚುಂಚನಗಿರಿ ಮಠದ ಮೇಲೆ ನಡೆದಿರುವ ಆದಾಯ ತೆರಿಗೆ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತವಲ್ಲದೆ ಸಮಾಜದ ಎಲ್ಲಾ ವರ್ಗದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಕುಚೋದ್ಯದ ಕೆಲಸವಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಸಂಘದ ಅಧ್ಯಕ್ಷ ಎಸ್.ಸಿ. ಜಯರಾಮ್, ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ನೀಡಿರುವ ಶ್ರೀಮಠವು ಜಾತ್ಯತೀತವಾಗಿ ಸಾರ್ವಜನಿಕ ಸೇವಾಕಾರ್ಯಗಳಾದ ಅನ್ನ ಮತ್ತು ಅಕ್ಷರ ದಾಸೋಹ ಹಾಗೂ ಆರೋಗ್ಯ ಸೇವೆಗಳಂತಹ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಸಮಾಜದ ಏಳಿಗೆಗಾಗಿ ಮಾಡಿಕೊಂಡು ಬರುತ್ತಿದೆ.
ಸರ್ಕಾರಗಳ ವಿರುದ್ಧ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದೆ.