ಮಾಜಿ ನೌಕರರ ಆರೋಪ ಸುಳ್ಳು: ಸರ್ಕೋ ಕಂಪನಿ
ಶಿವಮೊಗ್ಗ:ಸಂಸ್ಥೆಯ ಮಾಜಿ ನೌಕರರು ಮಾಡಿರುವ ಆರೋಪಗಳನ್ನು ಸರ್ಕೋ ಬಿಪಿಒ ಕಂಪನಿ ಅಲ್ಲಗಳೆದಿದೆ.
ಸಂಸ್ಥೆ ಹಾಗೂ ಅದರ ಹಿರಿಯ ಅಧಿಕಾರಿಗಳು ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ, ನೋಟಿಸ್ ಕೊಡದೇ ಕೆಲಸದಿಂದ ವಜಾ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಮಹಿಳೆಯರನ್ನು ಸರಿಯಾಗಿ ನಡೆಸಿಕೊಳ್ಳದೇ ಅವರ ವಿರುದ್ಧ ಕೆಟ್ಟ ಭಾಷೆ ಬಳಸಲಾಗುತ್ತಿದೆ ಎಂಬುದಾಗಿ ಅಲ್ಲಿನ ಮಾಜಿ ನೌಕರರು ಜಿಲ್ಲಾಧಿಕಾರಿಗೆ ದೂರಿದ್ದರು.
ಆದರೆ, ಈ ಆರೋಪಗಳೂ ಸತ್ಯಕ್ಕೆ ದೂರವಾಗಿದ್ದು, ಇದು ನಮ್ಮ ಸಂಸ್ಥೆಯ ಒಳ್ಳೆಯ ಹೆಸರಿಗೆ ಮಸಿ ಬಳೆಯಲು ನಡೆಸಲಾಗುತ್ತಿರುವ ಹುನ್ನಾರವಾಗಿದೆ ಎಂದು ಸರ್ಕೋ ಬಿಪಿಒ ಭಾರತ ವಲಯ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಅರೋರಾ ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆಗೆ ಕೆಟ್ಟ ಹೆಸರು: ಪತ್ರಿಕಾ ಹೇಳಿಕೆ ನೀಡಿರುವ ಕಂಪನಿ, ಸರ್ಕೋ ವಿರುದ್ಧ ಆರೋಪಗಳನ್ನು ಮಾಡಿರುವ ನೌಕರರು ಬಹುಕಾಲದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವಂತಹವರು. ತಮ್ಮ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಮಾಡಿಕೊಳ್ಳುವಂತೆ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿತ್ತಾದರೂ, ಕೊಟ್ಟ ವಕಾಶವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳದ ಕೆಲವು ನೌಕರರು ಸಂಸ್ಥೆಗೆ ಕೆಟ್ಟ ಹೆಸರು ತರುವಂತಹ ಚಟುವಟಿಕೆಗಳಲ್ಲಿ ತೊಡಗಿದರು.
ಅಷ್ಟೇ ಅಲ್ಲದೇ, ಗ್ರಾಹಕರ ದೂರವಾಣಿ ಕರೆಗಳನ್ನು ಕೂಡ ಕಡಿತಗೊಳಿಸಿದರು. ಬಿಪಿಒ ಸಂಸ್ಥೆಯೊಂದರ ವೃತ್ತಿಪರ ಕಾರ್ಯನಿರ್ವಹಣೆಗೆ ಮತ್ತು ವ್ಯವಹಾರಕ್ಕೆ ಸಂಪೂರ್ಣ ವಿರುದ್ಧವಾದ ಅಶಿಸ್ತು ಇದಾಗಿದ್ದು, ಇದನ್ನು ಸಂಸ್ಥೆ ಮಾನ್ಯ ಮಾಡಲು ಸಾಧ್ಯವೇ ಇಲ್ಲ. ಅಲ್ಲದೇ ಈಚೆಗೆ ಇವರು ನಕಲಿ ತರಂಗಗಳ ಮೂಲಕ (ಫೇಕ್ ವೇವಿಯರ್) ತಮ್ಮ ದೂರವಾಣಿ ಸಂಖ್ಯೆಗಳಿಗೇ ಸಂದೇಶ ರವಾನೆ ಮಾಡಿಕೊಂಡಿದ್ದೂ ಕಂಡು ಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಸರ್ಕೋ ಸಂಸ್ಥೆಯು ಜನತೆಯ ಸಲುವಾಗಿ ಇರುವ ಬಿಪಿಓ ಆಗಿದ್ದು, ಇಲ್ಲಿ ನೌಕರರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಿಲ್ಲ. ನಮ್ಮದು ಪಾರದರ್ಶಕ ಸಂಸ್ಥೆ. ಉದ್ಯೋಗಿಗಳ ಕಾರ್ಯನಿರ್ವಹಣೆಯನ್ನು ಗುರುತಿಸಲು ಈ ಉದ್ಯಮದ ನೀತಿಗೆ ಅನುಸಾರವಾದ ಎಲ್ಲ ನಿಯಮಾವಳಿಗಳನ್ನು ಅನುಸರಿಸುತ್ತಿದ್ದೇವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.