ಸ್ಪೋರ್ಟ್ಸ್ ಕಾಂಪ್ಲೆಕ್: ತಡೆ ಕೋರಿದ್ದ ಅರ್ಜಿ ವಜಾ
ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ ನಿರ್ಮಾಣಕ್ಕೆ ತಡೆ ಕೋರಿದ್ದ ಅರ್ಜಿ ವಜಾಗೊಂಡಿದೆ.
ಗೋಪಾಲಗೌಡ ಬಡಾವಣೆ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಸರ್ಕಾರವು 4 ವರ್ಷಗಳ ಹಿಂದೆ ನಿರ್ಮಿಸಲು ಉದ್ದೇಶಿಸಿದ್ದ ಸುಮಾರು 11 ಕೋಟಿ ವೆಚ್ಚದ ಕ್ರೀಡಾ ಸಮುಚ್ಚಯ ಕಾಮಗಾರಿಗೆ ನೆನೆಗುದಿಗೆ ಬಿದ್ದಿತ್ತು. ಉದ್ದೇಶಿತ ಕ್ರೀಡಾ ಸಮುಚ್ಚಯದ ಜಾಗಕ್ಕೆ ಹೊಂದಿಕೊಂಡಂತೆ ಶಾಲೆಯೊಂದಿದ್ದು, ಇಲ್ಲಿ ಸಾವಿರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಟೋಟಕ್ಕೆ ಈ ಕ್ರೀಡಾಂಗಣ ಬಳಕೆಯಾಗುತ್ತಿದ್ದುದರಿಂದ ಪರಮೇಶ್ವರ್ ಹಾಗೂ ಶಂಕರ್ ಎಂಬವರು ಹೈಕೋರ್ಟ್ನಲ್ಲಿ ಉದ್ದೇಶಿತ ಕ್ರೀಡಾ ಸಮುಚ್ಚಯದ ಕಾಮಗಾರಿಗೆ ತಡೆಯಾಜ್ಞೆ ತರಲು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ರಾಜ್ಯ ಉಚ್ಚನ್ಯಾಯಾಲಯವು ಇವರು ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯಿಲ್ಲ, ಬದಲಾಗಿ ಖಾಸಗಿ ಹಿತಾಸಕ್ತಿ ಇದೆ ಎಂದು ಹೇಳಿದೆ. ಅಲ್ಲದೇ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡಿದ ಕಾರಣಕ್ಕೆ ತಡೆಯಾಜ್ಞೆ ಅರ್ಜಿ ಸಲ್ಲಿಸಿದವರಿಗೆ 40 ಸಾವಿರ ದಂಡ ವಿಧಿಸಿ, ಇದರಲ್ಲಿ ತಲಾ 20 ಸಾವಿರ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಮತ್ತ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ನೀಡುವಂತೆ ಆದೇಶಿಸಿದೆ.
ಹೈಕೋರ್ಟ್ನ ಈ ತೀರ್ಪು ಕ್ರೀಡಾ ಸಮುಚ್ಚಯದ ನಿರ್ಮಾಣಕ್ಕೆ ಹೋರಾಟ ನಡೆಸಿದ ಅನೇಕ ಸಂಘ ಸಂಸ್ಥೆಗಳ ಹಾಗೂ ನಾಗರೀಕರಿಗೆ ಸಂದ ಜಯವಾಗಿದೆ ಎಂದು ಸ್ಥಳೀಯ ನಿವಾಸಿ ಕೆ.ಜಿ. ಚನ್ನಕೇಶವ ತಿಳಿಸಿದ್ದಾರೆ.