ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಯನೂರು ಜಿಲ್ಲಾ ಬಿಜೆಪಿ ನೂತನ ಸಾರಥಿ

Vishwanath S
Updated On : 21 Jul 2013, 1:22 am

ಶಿವಮೊಗ್ಗ: ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ, ರಾಜ್ಯ ಬಿಜೆಪಿ ವಕ್ತಾರ ಆಯನೂರು ಮಂಜುನಾಥ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಭಾನುವಾರ ನಗರದಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಚುನಾವಣೆ ಉಸ್ತುವಾರಿ ವಹಿಸಿದ್ದ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣೀಕ್ ಅವರ ಸಮ್ಮುಖದಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರು ಆಯನೂರು ಮಂಜನಾಥ್ ಅವರ ಹೆಸರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದಾಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ ಅನುಮೋದಿಸಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್, ಮುಖಂಡರಾದ ಗಿರೀಶ್ ಪಟೇಲ್, ಪದ್ಮನಾಭ ಭಟ್ ಸೇರಿದಂತೆ ಹಲವರು ಇದ್ದರು.
ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಎಚ್.ಸಿ. ಬಸವರಾಜಪ್ಪ, ಎಸ್. ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಹಲವರು ಇದ್ದರು.
ಪಕ್ಷದ ಸಿದ್ಧಾಂತ ಮುಖ್ಯ: ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಬಿಜೆಪಿ ಹೋರಾಟಗಳಿಂದ ಬೆಳೆದುಬಂದ ಪಕ್ಷ. ಇಲ್ಲಿ ವ್ಯಕ್ತಿಗಳಿಗಿಂತ ಸಿದ್ಧಾಂತ ಮುಖ್ಯ. ಹಾಗಾಗಿ ಒಂದು ಕಾಲದಲ್ಲಿ ಟು ಮೆಂಬರ್ಸ್ ಪಾರ್ಟಿ ಎಂಬ ಅಪಹಾಸ್ಯಕ್ಕೆ ಈಡಾಗಿದ್ದ ಪಕ್ಷ ಕೆಲವೇ ವರ್ಷಗಳಲ್ಲಿ ದೇಶದ, ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಿತು. ಇದೆಲ್ಲಾ ಸಾಧ್ಯವಾಗಿದ್ದು, ಪಕ್ಷ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದ. ಇಲ್ಲಿದ್ದ ಪ್ರಬಲ ಇಚ್ಛಾಶಕ್ತಿಯ ಹಿರಿಯರ ಆಶೀರ್ವಾದದಿಂದ ಎಂದರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಆಯನೂರು ಮಂಜುನಾಥ್, ನನ್ನ ಅಧ್ಯಕ್ಷಾವಧಿ ಅತ್ಯಂತ ಸಂಕೀರ್ಣವಾಗಿದೆ. ನಮ್ಮಿಂದ ಹೊರಹೋದ ನಾಯಕರು ಬಿಜೆಪಿಯನ್ನು ಮುಗಿಸುತ್ತೇವೆ ಎಂದು ಹೇಳಿ ನೋವುಂಟಾಗುವಂತೆ ಮಾಡಿದ್ದರು. ಆದರೆ ವಿಧಾನಸಭೆ ಚುನಾವಣೆಯ ಸೋಲು ನಮ್ಮಲ್ಲಿದ್ದ ಗೊಂದಲದಿಂದಲೇ ಹೊರತು ಸಂಘಟನೆಯ ಕೊರತೆಯಿಂದಲ್ಲ. ಈ ಸೋಲು ಸಾಂದರ್ಭಿಕ ಸೋಲಷ್ಟೇ. ಈಗ ಗೊಂದಲ ನಿವಾರಣೆಯಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲವು ನಮ್ಮದೇ ಎಂದರು.
ನರೇಂದ್ರ ಮೋದಿ ಅವರು ತಾವು ಹಿಂದೂ ರಾಷ್ಟ್ರಭಕ್ತ ಎಂದು ನೀಡಿದ ಹೇಳಿಕೆ ಸಮರ್ಥನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಎಲ್ಲರೂ ರಾಷ್ಟ್ರವಾದ ಒಪ್ಪಲೇಬೇಕು. ಅದರಲ್ಲಿ ತಪ್ಪೇನಿಲ್ಲ. ಯಾವುದೇ ಧರ್ಮದಲ್ಲಿ ಭಾರತದಲ್ಲಿ ಹುಟ್ಟಿದವರು ಮುಸ್ಲಿಮರಾಗಿದ್ದರೆ ಮುಸ್ಲಿಂ ರಾಷ್ಟ್ರವಾದಿ, ಕ್ರಿಶ್ಚಿಯನ್ ಆಗಿ ಹುಟ್ಟಿದ್ದರೆ ಕ್ರಿಶ್ಚಿಯನ್ ರಾಷ್ಟ್ರವಾದಿ ಎಂದು ಹೇಳಿಕೊಳ್ಳುವುದಿಲ್ಲವೇ ಎಂದು ಕಾರ್ಯಕ್ರಮದಲ್ಲಿ ಪ್ರಶ್ನಿಸಿದರು.
ಇಂದು ನಾವು ಉಗ್ರರು ಹಾಗೂ ರಾಷ್ಟ್ರದ್ರೋಹಿಗಳ ನಡುವೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ರಾಷ್ಟ್ರವಾದವನ್ನು ಎತ್ತಿಹಿಡಿಯುವ ನರೇಂದ್ರಮೋದಿ ಅವರ ಕೈ ಬಲಪಡಿಸಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement