ಶಾಲಾ ಮಕ್ಕಳ ಆಟೋ ಪ್ರಯಾಣ ನಿಷೇಧ
ಕ.ಪ್ರ.ವಾರ್ತೆ , ಶಿವಮೊಗ್ಗ ,.20
ಇನ್ನುಮುಂದೆ ಶಾಲೆಗೆ ಮಕ್ಕಳನ್ನು ಕರೆತರಲು ಆಟೋಗಳ ವ್ಯವಸ್ಥೆ ಮಾಡುವಂತಿಲ್ಲ. ಏಕೆಂದರೆ ಆಟೋಗಳ ಮೂಲಕ ಮಕ್ಕಳ ಪ್ರಯಾಣವನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದೆ.
ವಾಹನಗಳಲ್ಲಿ ಶಾಲಾ ಮಕ್ಕಳನ್ನು ಅಧಿಕೃತವಾಗಿ ಕರೆದೊಯ್ಯಲು ಅನುವಾಗುವಂತೆ ರಾಜ್ಯ ಸರ್ಕಾರ ಕರ್ನಾಟಕ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತಂದಿದ್ದು, ಇದರಂತೆ ಆಗಸ್ಟ್ 15ರೊಳಗೆ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಶಾಲಾ ವಾಹನ ಸುರಕ್ಷತಾ ಸಮಿತಿ ರಚಿಸುವಂತೆ ಸೂಚಿಸಿದೆ.
ಮಕ್ಕಳ ವಿವರ: ಶಾಲಾ ಮಕ್ಕಳ ಬ್ಯಾಗ್ಗಳನ್ನು ವಾಹನದ ಒಳಭಾಗದ ಕ್ಯಾರಿಯರ್ನಲ್ಲಿ ಇರಿಸಬೇಕು. ಯಾವುದೇ ಕಾರಣಕ್ಕೂ ವಾಹನದ ಹೊರಭಾಗದಲ್ಲಿ ನೇತುಹಾಕುವುದು ಅಥವಾ ಮೇಲ್ಭಾಗದ ಕ್ಯಾರಿಯರ್ನಲ್ಲಿ ಇಡುವುದು ನಿಷಿದ್ದವಾಗಿದೆ. ಪ್ರತಿ ಶಾಲಾ ವಾಹನದಲ್ಲಿ ಪ್ರಯಾಣಿಸುವ ಶಾಲಾ ಮಕ್ಕಳ ವಿವರವನ್ನು ವಾಹನದಲ್ಲಿ ಅಳವಡಿಸಬೇಕು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಅಧಿಸೂಚನೆ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರು ಅಧಿಸೂಚನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಸ್ಥರು, ಪೋಷಕರು, ಶಾಲಾ ವಾಹನ ಚಾಲಕರು ಹಾಗೂ ಮಾಲೀಕರೊಂದಿಗೆ ಸಭೆ ನಡೆಸಿದರು.
ವಾಹನ ಸುರಕ್ಷಾ ಸಮಿತಿ: ಶಾಲಾ ಮಕ್ಕಳನ್ನು ಶಾಲೆಗೆ ಸುರಕ್ಷಿತವಾಗಿ ಕರೆದೊಯ್ಯುವ ಸಲುವಾಗಿ ರಾಜ್ಯ ಉಚ್ಫ ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರ ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅದರಂತೆ ಪ್ರತಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಆದೇಶ ಪಾಲಿಸಬೇಕಿದೆ ಎಂದರು.
ನಿಯಮದಂತೆ ಪ್ರತಿ ಶಾಲೆಯಲ್ಲೂ ಶಾಲಾ ಸಿಬ್ಬಂದಿ, ಶಾಲಾ ವಾಹನ ಚಾಲಕರು, ಪೋಷಕರನ್ನೊಳಗೊಂಡಂತೆ ಆಗಸ್ಟ್ 15ರೊಳಗೆ ಶಾಲಾ ವಾಹನ ಸುರಕ್ಷಾ ಸಮಿತಿಯನ್ನು ರಚಿಸಿ, ಶಾಲಾ ವಾಹನದ ಸುಸ್ಥಿತಿಯ ಬಗ್ಗೆ ವರದಿ ತಯಾರಿಸಿ ಪ್ರಾಧಿಕಾರಕ್ಕೆ ನೀಡಬೇಕೆಂದು ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಕುಬೇರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸೂಚನೆಗಳು: ಶಾಲಾ ವಾಹನ ಗರಿಷ್ಠ 12,1 ಸಾಮರ್ಥ್ಯ ಹೊಂದಿರಬೇಕು ಹಾಗೂ 15 ವರ್ಷದ ಒಳಗೆ ನೊಂದಾಯಿಸಿರಬೇಕು ಎಂಬುದೂ ಸೇರಿದಂತೆ ನೋಂದಣಿ ದೃಢೀಕರಣ ಪತ್ರ, ಎಫ್ಸಿ, ವಿಮೆ, ಪರವಾನಗಿ, ಹೊಗೆ ತಪಾಸಣೆ, ಚಾಲನಾ ಪರವಾನಗಿ, ಬೆಂಕಿ ನಂದಿಸುವ ಉಪಕರಣ, ಪ್ರಥಮ ಚಿಕಿತ್ಸಾ ಕಿಟ್ಗಳು ಕಡ್ಡಾಯವಾಗಿ ಇರುವುದನ್ನು ಸಮಿತಿ ಖಾತರಿಪಡಿಸಿಕೊಳ್ಳಬೇಕು.
ಅಲ್ಲದೆ, ಶಾಲಾ ಮಕ್ಕಳನ್ನು ಯಾವ ಜಾಗದಿಂದ ಕರೆದೊಯ್ಯಬೇಕು ಎಂಬ ಬಗ್ಗೆ ಸ್ಥಳ ನಿಗದಿ, ಸಮಯ ಹಾಗೂ ಶಾಲೆ ಬಿಟ್ಟ ನಂತರ ಶಾಲಾ ವಾಹನ ಎಲ್ಲಿ ನಿಲ್ಲಬೇಕು ಎಂಬ ಬಗ್ಗೆ ಸಂಚಾರಿ ಪೊಲೀಸ್ ಹಾಗೂ ಆರ್ಟಿಓ ಅವರಿಂದ ದೃಢೀಕರಿಸಿಕೊಳ್ಳಬೇಕು.
ಶಾಲಾ ವಾಹನ ಕಡ್ಡಾಯವಾಗಿ ಗಟ್ಟಿ ರಕ್ಷಣಾ ಕವಚವನ್ನು ಹೊಂದಿರಬೇಕು. ಸಂಪೂರ್ಣ ಹಳದಿ ಬಣ್ಣದಿಂದ ಕೂಡಿದ್ದು, ಮಧ್ಯಭಾಗದಲ್ಲಿ ಹಸಿರು ಪಟ್ಟಿಯಿಂದ ಸುತ್ತಲೂ ಆವೃತ್ತವಾದ ಜಾಗದಲ್ಲಿ ಶಾಲಾ ವಾಹನ ಎಂದು ಬಿಳಿಬಣ್ಣದಿಂದ ಬರೆದಿರಬೇಕು. 12 ವರ್ಷದೊಳಗಿನ ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ಒಂದೂವರೆ ಪಟ್ಟು ಮಕ್ಕಳನ್ನು ಸಾಗಿಸುವ ಸಾಮರ್ಥ್ಯ ಹಾಗೂ 12 ವರ್ಷ ನಂತರದ ಮಕ್ಕಳನ್ನು ಒಂದು ಸೀಟು ಎಂದು ಪರಿಗಣಿಸಬೇಕು.
ವಾಹನ ಎಲ್ಪಿಜಿ ಇಂಧನ ಹೊಂದಿದ್ದರೆ ಈ ಬಗ್ಗೆ ಆರ್ಟಿಓ ಅವರಿಂದ ಅನುಮತಿ ಪಡೆದಿರಬೇಕು. ಹಾಗೂ ಸೀಟು ಹೊಂದಾಣಿಕೆ ಸಂಬಂಧ ಹೊಸ ಬದಲಾವಣೆ ಮಾಡತಕ್ಕದ್ದಲ್ಲ. ವಾಹನ ಸಂಪೂರ್ಣವಾಗಿ ಬಾಗಿಲು ಭದ್ರವಾಗಿ ಮುಚ್ಚುವ ಸೌಲಭ್ಯ ಹೊಂದಿರಬೇಕು. ಬಣ್ಣದ ಗಾಜುಗಳಿಗೆ ಅವಕಾಶವಿಲ್ಲ.
ಶಾಲಾ ವಾಹನದ ಚಾಲಕ ಕಡ್ಡಾಯವಾಗಿ ತಿಳಿನೀಲಿ ಬಣ್ಣದ ಅಂಗಿ ಮತ್ತು ಪ್ಯಾಂಟ್ ಹಾಗೂ ಕಪ್ಪು ಶೂ ಸಮವಸ್ತ್ರದೊಂದಿಗೆ ತನ್ನ ಹೆಸರಿನ ಪಟ್ಟಿಯನ್ನು ಧರಿಸಬೇಕು.
ವಾಹನ ಸುರಕ್ಷತಾ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಸಭೆಯ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಹಾಗೂ ತಿದ್ದುಪಡಿ ಸಮರ್ಪಕ ಅನುಷ್ಠಾನದ ಬಗ್ಗೆ ವರದಿ ಸಲ್ಲಿಸಬೇಕು.