ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದಕ್ಷಿಣ ಚಿರಾಪುಂಜಿ ಆಗುಂಬೆ ಅಲ್ಲ ಹುಲಿಕಲ್!

Lingaraj Badiger
Updated On : 22 Jul 2013, 10:47 am

ಕ.ಪ್ರ.ವಾರ್ತೆ, ಹೊಸನಗರ, ಜು. 20
ಅತಿ ಹೆಚ್ಚು ಮಳೆ ಬೀಳುವ ಕರ್ನಾಟಕದ ಚಿರಾಪುಂಜಿ ಸ್ಥಾನಕ್ಕೆ ಹುಲಿಕಲ್ ಪ್ರದೇಶವೇ ಹಾಟ್ ಫೆವರೀಟ್!
53 ವರ್ಷಗಳ ಅಂಕಿ ಅಂಶಗಳಿಂದ ಇದು ಸಾಬೀತಾಗಿದೆ. ತನ್ನದೆ ಪಾರುಪತ್ಯ ಮೆರದಿರುವ ಹುಲಿಕಲ್ ಆಗುಂಬೆಗಿಂತಲೂ ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಹೊರಹೊಮ್ಮಿದೆ. ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಹುಲಿಕಲ್ ಗಮನ ಸೆಳೆಯುತ್ತಲೇ ಅನೇಕ ರೀತಿಯ ಚರ್ಚೆಗೂ ಕಾರಣವಾಗಿತ್ತು. ವಾರಾಹಿ ಯೋಜನೆಯಡಿ ಮಾಣಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಆದ ಕಾಡುನಾಶ ಸೇರಿದಂತೆ ಹಲವು ಕಾರಣ ಇತ್ತೀಚಿನ ವರ್ಷದಲ್ಲಿ ಆಗುಂಬೆಯಲ್ಲಿ ಮಳೆ ಕಡಿಮೆಯಾಗಿದೆ. ಸಹಜವಾಗಿ ಹುಲಿಕಲ್ ಗಮನ ಸೆಳೆದಿದೆ ಎಂದು ಅಭಿಪ್ರಾಯ ಕೂಡ ಕೇಳಿ ಬಂದಿತ್ತು. ಆದರೆ ಹುಲಿಕಲ್‌ನಲ್ಲಿ ಹಿಂದಿನಿಂದಲೂ ಉತ್ತಮ ಮಳೆಯಾಗುತ್ತಿದ್ದರೂ ಗಮನಕ್ಕೆ ಬಂದಿರಲಿಲ್ಲ ಅಷ್ಟೆ. 'ಕರ್ನಾಟಕ ಚಿರಾಪುಂಜಿ'ಯಾಗಿ ಆಗುಂಬೆ ಗಮನ ಸೆಳೆದ ಹಿನ್ನಲೆಯಲ್ಲಿ ಹುಲಿಕಲ್ ಎಲೆಮರೆಕಾಯಿಯಂತಾಗಿತ್ತು. ಹುಲಿಕಲ್ ಮಳೆ ವಿವರ ಸಕಾಲಕ್ಕೆ ಲಭ್ಯವಾಗದ ಹಿನ್ನಲೆಯಲ್ಲಿ ಬೆಳಕಿಗೆ ಬಂದಿರಲಿಲ್ಲ. ಹುಲಿಕಲ್ ಘಾಟ್‌ನಲ್ಲಿ ಹೆಚ್ಚು ಮಳೆಯಾಗುತ್ತಿರುವ ಬಗ್ಗೆಯೂ ಈ ಹಿಂದೆಯೂ ಕನ್ನಡಪ್ರಭ ವರದಿ ಮಾಡಿತ್ತು. ಇದೀಗ ಅಧಿಕೃತವಾಗಿಯೇ ಅಂಕಿ ಸಂಖ್ಯೆಗಳು ಇದನ್ನು ಪುಷ್ಠಿಕರಿಸುತ್ತಿವೆ.
ಹುಲಿಕಲ್ ಪರ ಅಂಕಿಅಂಶ: ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಅಂಕಿ ಅಂಶದ  ಪ್ರಕಾರ 1960ರಿಂದ ಈಚಿನ 53 ವರ್ಷದ ಮಳೆ ಇತಿಹಾಸದಲ್ಲಿ ಹುಲಿಕಲ್‌ನಲ್ಲಿ 39 ವರ್ಷ ಹೆಚ್ಚು ಮಳೆ ಬಿದ್ದಿದೆ. ಆದರೆ ಆಗುಂಬೆಯಲ್ಲಿ 12 ವರ್ಷ ಮಾತ್ರ ಹೆಚ್ಚು ಮಳೆ ಸುರಿದಿದೆ.
ಈ ಅಂಕಿಅಂಶದ ಪ್ರಕಾರ 60ರ ದಶಕದಲ್ಲಿ ಹುಲಿಕಲ್ ಮತ್ತು ಆಗುಂಬೆಯಲ್ಲಿ ಕ್ರಮವಾಗಿ 7 ವರ್ಷ-1ವರ್ಷ, 70ರ ದಶಕದಲ್ಲಿ 6-4, 80ರ ದಶಕದಲ್ಲಿ 8-2, 90ರ ದಶಕದಲ್ಲಿ 8-2, 2001ರಿಂದ 10ರವರೆಗೆ 7-3 ವರ್ಷಗಳಲ್ಲಿ ಹೆಚ್ಚು ಮಳೆ ಬಿದ್ದಿದೆ. 2011 ಮತ್ತು 12ರಲ್ಲಿ ಹುಲಿಕಲ್‌ನಲ್ಲಿ ಹೆಚ್ಚು ಮಳೆಯಾಗಿದ್ದು ತನ್ನ ಪಾರುಪತ್ಯ ಮೆರದಿದೆ. ಪ್ರಸಕ್ತ ವರ್ಷ ಜುಲೈ 18ರ ವರೆಗೆ ಹುಲಿಕಲ್‌ನಲ್ಲಿ 4226 ಮಿಮೀ, ಆಗುಂಬೆಯಲ್ಲಿ 3932 ಮಿಮೀ ಮಳೆ ಬಿದ್ದಿದ್ದು ಹುಲಿಕಲ್ ಅಗ್ರಸ್ಥಾನದಲ್ಲಿದೆ. ಆಗುಂಬೆ ಮತ್ತು ಹುಲಿಕಲ್ ಘಾಟ್ ಪ್ರದೇಶಗಳಲ್ಲಿ ಮಳೆಗಾಲ ಬಂತೆಂದರೆ ಎಡಬಿಡದೆ ಸುರಿಯುವ ಮುಸಲಧಾರೆಗೆ ತಮ್ಮನ್ನು ಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತವೆ. ಅಪೂರ್ವ ಜೀವರಾಶಿ, ವನ್ಯಜಗತ್ತನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಈ ಅಕ್ಕಪಕ್ಕದ ಘಟ್ಟಗಳು ದಕ್ಷಿಣಭಾರತದ ಚಿರಾಪುಂಜಿ ಬಿರುದಿಗಾಗಿ ತಮಗರಿವಿಲ್ಲದಂತೆ ಪೈಪೋಟಿ ನಡೆಸುತ್ತ ಬಂದಿವೆ. ಕಿರೀಟ ಯಾರಿಗೆ ಎಂಬುದನ್ನು ಸರ್ಕಾರ ಸಮಗ್ರ ಅಧ್ಯಯನ ನಡೆಸಿ ಅಧಿಕೃತ ಮಾಹಿತಿ ನೀಡುವುದು ಈಗಿನ ಅಗತ್ಯವಾಗಿದೆ.
- ರವಿ ಬಿದನೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement