ಬಸ್ತಿಕೊಪ್ಪ ಗ್ರಾಮಕ್ಕೆ ಸಂಪರ್ಕ ಕಡಿತ
ಕ.ಪ್ರ.ವಾರ್ತೆ, ಸೊರಬ, ಜು.21
ತಾಲೂಕಿನಾದ್ಯಂತ ಮಳೆಯ ಆರ್ಭಟ ಹೆಚ್ಚಾಗಿದ್ದು, ಶುಕ್ರವಾರ ರಾತ್ರಿ ಸುರಿದ ಮಳೆಗೆ ಚಂದ್ರಗುತ್ತಿ ಗ್ರಾಮದ ಸಮೀಪವಿರುವ ಬಸ್ತಿಕೊಪ್ಪ ಗ್ರಾಮ ತನ್ನ ರಸ್ತೆ ಸಂಪರ್ಕ ಕಡಿದುಕೊಂಡಿದೆ.
ಇಲ್ಲಿನ ಕತವಾಯಿ ಹಳ್ಳ ತುಂಬಿ ಹರಿಯುತ್ತಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಈ ಹಿಂದೆ ನಿರ್ಮಾಣಗೊಂಡ ಅಪಕ್ವ ಸೇತುವೆಯೇ ಇಂತಹ ಅತಂತ್ರ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ಹಲವು ಬಾರಿ ಶಾಸಕರ, ಇಲಾಖೆಗಳ ಗಮನಕ್ಕೆ ತಂದಿದ್ದರಾದರೂ ಯಾವೊಂದು ಪ್ರಯೋಜನವೂ ಆಗದೆ ಪ್ರತಿ ಮಲೆಗಾಲದಲ್ಲಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ನೂರು ಮನೆಗಳಿರುವ ಈ ಗ್ರಾಮದಲ್ಲಿ ಅನಾರೋಗ್ಯ ಉಂಟಾದಲ್ಲಿ, ದಿನಂಪ್ರತಿ ಶಾಲೆಗೆ ಹೋಗುವ ಮಕ್ಕಳು ಜೀವ ಕೈಯಲ್ಲಿ ಹಿಡಿದು ನೀರುದಾಟಿ ಚಂದ್ರಗುತ್ತಿಗೆ ಬರಬೇಕಾದಂತಹ ಅನಿವಾರ್ಯತೆ ಎದುರಾಗಿದೆ.