ಭಜನಾ ತಂಡಗಳ ಸಮಾವೇಶ
ಶಿವಮೊಗ್ಗ: ನಗರದ ಭಜನಾಮಂಡಳಿಗಳ ಒಕ್ಕೂಟ ಭಜನಾ ಪರಿಷತ್ ಆ.31 ಮತ್ತು ಸೆ.1ರಂದು 60 ಅಡಿ ರಸ್ತೆಯಲ್ಲಿರುವ ಶನೇಶ್ಚರ ದೇವಸ್ಥಾನ ಹಾಗೂ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾಮೂಹಿಕ ವಿಷ್ಣು ಸಹಸ್ರನಾಮಾವಳಿ ಅರ್ಚನೆ ಮತ್ತು ಭಜನಾ ತಂಡಗಳ ಸಮಾವೇಶ ಹಮ್ಮಿಕೊಂಡಿದೆ. ಸಮಾವೇಶದಲ್ಲಿ ಪಾಲ್ಗೊಂಡ ಭಜನಾ ಮಂಡಳಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿ ತಂಡಕ್ಕೆ 10 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಮಕ್ಕಳು ರಾಧಾಕೃಷ್ಣ ವೇಷಭೂಷದಲ್ಲಿ ಪಾಲ್ಗೊಳ್ಳಬಹುದು. ಸದಸ್ಯರು ದಾಸರ ಪದಕ್ಕೆ ಸಮೂಹ ನೃತ್ಯ, ಜಾನಪದ, ದೇಶಭಕ್ತಿ ಗೀತೆಗೆ ನೃತ್ಯ, ಪೌರಾಣಿಕ ಕಿರುನಾಟಕ, ಹಾಸ್ಯ ಚಟಾಕಿ ಮತ್ತು ರಾಮಾಯಣ ರಸಪ್ರಶ್ನೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ನ ಅಧ್ಯಕ್ಷ ಬಿ. ಸಂಜೀವ ಶೆಟ್ಟಿ ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆ
ಶಿವಮೊಗ್ಗ: ಕರ್ನಾಟಕ ಸುಗಮ ಸಂಗೀತ ಪರಿಷತ್ ಆ.18ರಂದು ಬೆಳಿಗ್ಗೆ 10ಕ್ಕೆ ಜಯನಗರದ 7ನೇ ಬಡಾವಣೆಯಲ್ಲಿರುವ ನ್ಯಾಷನಲ್ ಕಾಲೇಜಿನ ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಪರಿಷತ್ನ ವಾರ್ಷಿಕ ಸರ್ವ ಸದಸ್ಯರ ಕರೆಯಲಾಗಿದೆ. ಸಭೆಯಲ್ಲಿ ಎಲ್ಲಾ ಸದಸ್ಯರು ಪಾಲ್ಗೊಳ್ಳಬೇಕು ಎಂದು ಪರಿಷತ್ನ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಜಿಲ್ಲಾ ಘಟಕಕ್ಕೆ ಆಯ್ಕೆ
ಶಿವಮೊಗ್ಗ: ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಗೌರವ ಅಧ್ಯಕ್ಷರಾಗಿ ವಿ. ವೆಂಕಟರಮಣ, ಅಧ್ಯಕ್ಷರಾಗಿ ಬಿ.ಆರ್. ದಿವಾಕರ ಮತ್ತು ಉಪಾಧ್ಯಕ್ಷ ಶೇಖರಪ್ಪ, ಚಂದ್ರಯ್ಯ ಆಯ್ಕೆಯಾಗಿದ್ದಾರೆ. ಸಲಹೆಗಾರರಾಗಿ ಗುರುಪಾದಪ್ಪ, ಕಾರ್ಯದರ್ಶಿ ಪಿ.ಎಂ. ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಮಹಾಂತೇಶ್ರಾವ್, ಖಜಾಂಚಿ ಕರಿಯಮ್ಮ ಹಾಗೂ ಕಾರ್ಯಕಾರಿ ಸಮಿತಿಗೆ ಲೋಕೇಶ್, ರವಿ, ಚಂದು, ರೂಪ, ಶಾಂತ, ಸವಿತ ಮತ್ತು ಹೇಮಾವತಿ ಆಯ್ಕೆಯಾಗಿದ್ದಾರೆ ಎಂದು ವಿ. ವೆಂಕಟರಮಣ ತಿಳಿಸಿದ್ದಾರೆ.
ಶೇ.100 ಫಲಿತಾಂಶ
ಶಿವಮೊಗ್ಗ: ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಮಾರ್ಚ್ 2013ರಲ್ಲಿ ನಡೆಸಿದ ಪ್ರಥಮ ಮತ್ತು ದ್ವಿತೀಯ ವರ್ಷದ ಚಿತ್ರಕಲಾ ಫೌಂಡೇಶನ್ ಹಾಗೂ ಬ್ಯಾಚುಲರ್ ಆಫ್ ವಿಜುಯಲ್ ಆರ್ಟ್ ಪದವಿ ಕೋರ್ಸ್ಗಳ ಪರೀಕ್ಷೆಯಲ್ಲಿ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಚಿತ್ರಕಲಾ ಮಹಾವಿದ್ಯಾಲಯ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಈ ಫಲಿತಾಂಶಕ್ಕೆ ಕಾರಣರಾದ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಸೋಲಾಪುರ ಅಭಿನಂದನೆ ಸಲ್ಲಿಸಿದ್ದಾರೆ.
ನಾಯರ್ ಸಮುದಾಯಕ್ಕೆ ಸಂಘಟನೆ ಅಗತ್ಯ: ಪಲೇರಿ
ಶಿವಮೊಗ್ಗ: ನಾಯರ್ ಸಮುದಾಯ ಕರ್ನಾಟಕದಲ್ಲಿ ಕಡಿಮೆಯಿದ್ದು, ಈ ಸಣ್ಣ ಸಮುದಾಯದ ಸಮಸ್ಯೆ ಪರಿಹರಿಸಿಕೊಳ್ಳಲು ಸಂಘಟನೆ ಅಗತ್ಯ ಎಂದು ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಅಧ್ಯಕ್ಷ ರಾಮಚಂದ್ರನ್ ಪಲೇರಿ ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು, ನಮ್ಮ ಸಂಘಟನೆಯಿಂದ ಬೇರೆಯವರಿಗೆ ನೋವುಂಟು ಮಾಡಬಾರದು ಎಂದರು.
ಬೇರೆ ಸಂಘಟನೆಗಳಿಗೆ ನೋವಾಗದಂತೆ ಪ್ರತಿ ಸಮುದಾಯದ ಸಂಘಟನೆಗಳು ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಸಂಘಟನೆಗೆ ಅರ್ಥ ಬರುತ್ತದೆ. ಬೇರೆಯವರ ನೋವಿಂದ ಸಂಘಟನೆ ಸ್ಥಾಪಿಸುವುದು ಒಳ್ಳೆಯದಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಜಿಲ್ಲಾಧ್ಯಕ್ಷ ವಿ.ಕೆ. ಗೋವಿಂದನ್ ನಾಯರ್, ವಿ. ವಿಜಯನ್, ಸಾವಿತ್ರಿ ಪೊದುವಾಳ್, ಎಂ. ರಾಧಕೃಷ್ಣನ್ ಮತ್ತಿತರರು ಇದ್ದರು.