ಮಲೆನಾಡಿನಲ್ಲಿ ಮುಂದುವರಿದ ಮಳೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.21
ಮಲೆನಾಡಿನಲ್ಲಿ ಜಡಿಮಳೆ ಮುಂದುವರಿದಿದೆ. ಕಳೆದ ಎರಡು ದಿನಕ್ಕೆ ಹೋಲಿಸಿದರೆ ಭಾನುವಾರ ಮಳೆ ಅಬ್ಬರ ಕಡಿಮೆಯಾಗಿದೆಯಾದರೂ, ಪ್ರಮುಖ ನದಿಗಳು ಮಾತ್ರ ಅಪಾಯದ ಮಟ್ಟದಲ್ಲೇ ಹರಿಯುತ್ತಿವೆ.
ಭಾನುವಾರ ಮುಂಜಾನೆ 8.30ಕ್ಕೆ ದಾಖಲಾದಂತೆ ಹಿಂದಿನ 24 ಗಂಟೆಯಲ್ಲಿ ತೀರ್ಥಹಳ್ಳಿ, ಆಗುಂಬೆಯಲ್ಲಿ ತಲಾ 9 ಸೆಂ.ಮೀ., ಲಿಂಗನಮಕ್ಕಿ 6 ಸೆಂ.ಮೀ., ತಾಳಗುಪ್ಪ, ಹುಂಚದಕಟ್ಟೆ ತಲಾ 5 ಸೆಂ.ಮೀ., ಹೊಸನಗರ, ಸೊರಬದಲ್ಲಿ ತಲಾ 5 ಸೆಂ.ಮೀ., ಅರಸಾಳು, ಆನವಟ್ಟಿ, ಭದ್ರಾವತಿ, ತ್ಯಾಗರ್ತಿಯಲ್ಲಿ ತಲಾ 3 ಸೆಂ.ಮೀ., ಸಾಗರ, ಶಿಕಾರಿಪುರ, ಶಿರಾಳಕೊಪ್ಪದಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ. ತುಂಗಾ ನದಿಯ ಒಳ ಹರಿವು ಹೆಚ್ಚಾಗಿದ್ದು, ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ.
ತೀರ್ಥಹಳ್ಳಿ ತಾಲೂಕು ಚೆಂಗಾರಿನಲ್ಲಿ ಹರಿಯುವ ಮಾಲತಿ ನದಿಯಲ್ಲಿ ಶನಿವಾರ ಕೊಚ್ಚಿಹೋಗಿದ್ದ ದೋಣಿ ಭೀಮನಕಟ್ಟೆಯ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ದೋಣಿಯಲ್ಲಿ ಪ್ರಯಾಣಿಕರಿದ್ದರೆ ಎಂಬುದರ ಕುರಿತು ಮಾಹಿತಿ ತಿಳಿದುಬಂದಿಲ್ಲ.