ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್ಕಾರಕ್ಕೆ ನೈಜ ಸಮಸ್ಯೆ ಗೊತ್ತಾಗುವುದೇ ಇಲ್ಲ: ಚತ್ರವರ್ತಿ ಸೂಲಿಬೆಲೆ ಅಸಮಾಧಾನ

Lingaraj Badiger
Updated On : 22 Jul 2013, 10:47 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.21
ಒಂದು ದಿನವೂ ಕೃಷಿ ಚಟುವಟಿಕೆ ನಡೆಸದವರು ದೇಶದ ಕೃಷಿ ಸಚಿವರಾಗುತ್ತಾರೆ, ವ್ಯಾಪಾರ-ವಹಿವಾಟು ತಿಳಿಯದವರು ಹಣಕಾಸು ಸಚಿವರಾಗುತ್ತಾರೆ. ಇದರಿಂದ ಈ ಕ್ಷೇತ್ರಗಳ ನೈಜ ಸಮಸ್ಯೆ ಸರ್ಕಾರಕ್ಕೆ ಎಂದಿಗೂ ಗೊತ್ತಾಗುವುದೇ ಇಲ್ಲ, ಸಮಸ್ಯೆಗಳಿಗೆ ಪರಿಹಾರವೂ ಸಿಗುವುದಿಲ್ಲ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘಗಳ (ಆವೋಪಾ) ರಾಜ್ಯ ಮಟ್ಟದ 7ನೇ ಸಮ್ಮೇಳನದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಆರ್ಯವೈಶ್ಯರ ಪಾತ್ರ ಕುರಿತು ಮಾಡಿದ ಅವರು, ಜನ ಸಾಮಾನ್ಯರು ಕೆಲಸ ಮಾಡಲು ಆಸಕ್ತಿ ತೋರದಂತಹ ವಾತಾವರಣವನ್ನು ಸರ್ಕಾರದ ವಿವಿಧ ಯೋಜನೆಗಳು ತಂದಿಟ್ಟಿವೆ. 1ರಂತೆ 30 ಕೆಜಿ ಅಕ್ಕಿಯ ಜೊತೆಗೆ ಅಗ್ಗದ ಮದ್ಯ ಸರಬರಾಜು ಮಾಡಿದರೆ ಯಾರು ಕೆಲಸ ಮಾಡಲು ಆಸಕ್ತಿ ತೋರುತ್ತಾರೆ, ದೇಶದ ಜಿಡಿಪಿಯಾದರೂ ಹೇಗೆ ಹೆಚ್ಚಾಗುತ್ತದೆ ಎಂದು ಪ್ರಶ್ನಿಸಿದರು.
ಗಂಭೀರ ಪರಿಣಾಮ: ರುಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ರೀತಿಯಲ್ಲಿ ಹದಗೆಡುತ್ತಿದೆ. ನಮ್ಮ ದೇಶದ ಆಮದು ಪ್ರಮಾಣ ಹೆಚ್ಚಾಗಿದ್ದು, ರಫ್ತು ಕಡಿಮೆ ಇದು. ಈ ಬೆಳವಣಿಗೆ ರುಪಾಯಿ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದರು.
ರುಪಾಯಿ ಮೌಲ್ಯ ಕುಸಿತದಿಂದಾಗಿ ನಾವು ಖರೀದಿಸುವ ಸಾಮರ್ಥ್ಯ ಕಡಿಮೆಯಾಗಲಿದೆ. ಈ ಪರಿಸ್ಥಿತಿಯನ್ನು ನಮ್ಮನ್ನಾಳುವವರೇ ಸೃಷ್ಟಿಸಿಟ್ಟಿರುವುದು ದುರಂತ ಎಂದ ಅವರು, ಪರಿಸ್ಥಿತಿ ಸುಧಾರಿಸದಿದ್ದರೆ ಮುಂದೊಂದು ದಿನ ದೇಶವು ಕರಾಳ ಪರಿಸ್ಥಿತಿಗೆ ತಳ್ಳಲ್ಪಡುತ್ತದೆ ಎಂದು ತಿಳಿಸಿದರು.
ವಿದೇಶಿ ನೇರ ಬಂಡವಾಳಕ್ಕೆ ದೇಶವು ಹೆಚ್ಚಿನ ಅನುಕೂಲ ಮಾಡಿಕೊಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ವಾಲ್‌ಮಾರ್ಟ್ ನಂತಹ ದೊಡ್ಡ ದೊಡ್ಡ ಉದ್ಯಮಗಳು ದಾಳಿ ಇಡುತ್ತವೆ. ಇದರಿಂದ ಸಣ್ಣಪುಟ್ಟ ಚಿಲ್ಲರೆ ಅಂಗಡಿಗಳಿಗೆ ಕವಡೆ ಕಿಮ್ಮತ್ತು ಇರುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೈ ಚಾಚಿ ನಿಲ್ಲಬೇಕಾಗುತ್ತದೆ: ನಾವು ಗಟ್ಟಿಯಾಗಿ ನಿಲ್ಲದಿದ್ದರೆ, ನಮ್ಮನ್ನೇ ಅವು ನುಂಗಿ ಹಾಕಿಬಿಡುತ್ತವೆ. ಈಸ್ಟ್ ಇಂಡಿಯಾ ಅಂದು ದೇಶವನ್ನೂ ನಿಯಂತ್ರಿಸಿದಂತೆ ಮತ್ತೆ ಭಾರತ ಗುಲಾಮಗಿರಿ ತಳ್ಳಲ್ಪಡುತ್ತದೆ ಎಂದ ಅವರು, ನಮ್ಮ ಜಮೀನು, ನೀರು, ಗಾಳಿ, ಕಡಿಮೆ ಸಂಬಳ ನೌಕರ ಎಲ್ಲವನ್ನೂ ವಿದೇಶಿ ಕಂಪನಿಗಳು ಪಡೆದುಕೊಳ್ಳುತ್ತವೆ. ನಂತರ ಇಡೀ ದೇಶ ಅವರ ಮುಂದೆ ಕೈ ಚಾಚಿ ನಿಲ್ಲಬೇಕಾಗುತ್ತದೆ, ಇಂತಹ ದೌರ್ಬಾಗ್ಯ ಬೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ನಮ್ಮ ಕನಸುಗಳು ಚಿಕ್ಕದಾಗಿರುತ್ತವೆ, ದೊಡ್ಡ ಕನಸುಗಳನ್ನು ಕಾಣುವುದೇ ಇಲ್ಲ. ಇದೇ ಮನಸ್ಥಿತಿಯಿಂದ ದೇಶಕ್ಕೆ ದೊಡ್ಡ ಕನಸಿಲ್ಲ ಎಂದರು.
ಚರ್ಚಿಸಬೇಕಾಗಿದೆ: ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ವಿದೇಶಿ ನೇರ ಬಂಡವಾಳ ನೀತಿಯ ಬಗ್ಗೆ ಸಮಾಜದಲ್ಲಿ ಒಂದಷ್ಟು ಗಂಭೀರ ಚರ್ಚೆಗಳಾಗಬೇಕಾದ ಅಗತ್ಯವಿದೆ ಎಂದರು.
ಬೆಂಗಳೂರು ಹೆಬ್ಬಾಳ ಶಾಸಕ ಜಗದೀಶ ಕುಮಾರ್, ಕರೂರು ವೈಶ್ಯ ಬ್ಯಾಂಕ್ ಅಧ್ಯಕ್ಷ ಕೆ.ಪಿ. ಕುಮಾರ್, ವೇಮುಲು ರಾಮಕೃಷ್ಣ, ವೆಂಕಟೇಶ್, ಸುಶೀಲಾ ಬಾಲಕೃಷ್ಣ, ಡಿ.ವಿ. ಸತ್ಯನಾರಾಯಣ, ಎಸ್.ಕೆ. ಶೇಷಾಚಲ, ಎಸ್.ವಿ. ದೀಪಕ್, ಸಂಜೀವಪ್ಪ ಶ್ರೇಷ್ಠಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement