ಆನವಟ್ಟಿ-ಕೆರೆಹಳ್ಳಿ ಸಂಪರ್ಕ ಕಡಿತ
ಕ.ಪ್ರ.ವಾರ್ತೆ, ಸೊರಬ, ಜು.22
ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆನವಟ್ಟಿ-ಕೆರೆಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಜಡೆ ಹೋಬಳಿ ಕೆರೆಹಳ್ಳಿ, ಕೋಟೆಕೊಪ್ಪ, ಹೊಸಳ್ಳಿ, ಕಾತುವಳ್ಳಿ, ಚಗಟೂರು, ತುಮರಿಕೊಪ್ಪ ಇನ್ನೂ ಅನೇಕ ಗ್ರಾಮಸ್ಥರು ಇದೇ ಮಾರ್ಗದಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯಗಳು, ದಿನಸಿ, ಕಚೇರಿ ಇತ್ಯಾದಿ ಕಾರ್ಯಗಳಿಗಾಗಿ ಓಡಾಡಬೇಕಾಗುತ್ತದೆ. ಈ ಮಾರ್ಗದಲ್ಲಿ ಒಂದೇ ಒಂದು ಬಸ್ ಸಂಚರಿಸುತ್ತಿದ್ದು, ಈಗ ರಸ್ತೆ ಕುಸಿದಿರುವುದರಿಂದ ಸಂಚಾರ ನಿಲ್ಲಿಸಿದೆ.
ಜನತೆಯ ಹಿತದೃಷ್ಟಿಯಿಂದ ತಾತ್ಕಾಲಿಕ ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಈ ಹಿಂದೆ ಶಾಸಕ ಮಧುಬಂಗಾರಪ್ಪ, ಜಿಪಂ ಸದಸ್ಯ ಎಚ್. ಗಂಗಾಧರಪ್ಪ ಮತ್ತು ತಾಪಂ ಅಧ್ಯಕ್ಷ ಬಿಳಗಲಿ ಸದಾನಂದಗೌಡ ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆಯ ಬೇಜವಾಬ್ಧಾರಿ ಖಂಡಿಸಿರುವ ಗ್ರಾಮಸ್ಥರು, ಇನ್ನೂ ವಿಳಂಬವಾದರೆ ಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಪಾಯದ ಮಟ್ಟದಲ್ಲಿ ವರದಾ, ದಂಡಾವತಿ: ಕಳೆದ ಶುಕ್ರವಾರದಿಂದ ಸುರಿಯುತ್ತಿರುವ ಮಳೆ ತೀವ್ರತೆ ಹೆಚ್ಚಿದ್ದು, ವರದಾ, ದಂಡಾವತಿ ನದಿಗಳು ಉಕ್ಕಿ ಹರಿಯಲಾರಂಭಿಸಿವೆ.
ತಾಲೂಕಿನ ಸಾವಿರಕ್ಕೂ ಹೆಚ್ಚಿನ ಕೆರೆಗಳು ಭರ್ತಿಯಾಗಿವೆ. ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ತಗ್ಗಿನ ಜಾಗ, ಜಮೀನುಗಳು ಜಲಾವೃತಗೊಂಡಿವೆ.
ತಾಲೂಕಿನ ಯಕ್ಷಿ ಗ್ರಾಮದ ಸಿವಿನ್ ರಾಮಪ್ಪ ಎಂಬುವವರ ಮನೆಯ ಮೇಲೆ ಮರ ಬಿದ್ದು, ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆ ಜಖಂಗೊಂಡಿದೆ.
ರಾಮಪ್ಪ ಮನೆಯ ಮೇಲೆ ಸುಮಾರು 60 ಅಡಿ ಎತ್ತರದ ಹೊನ್ನೆ ಮರ ಬಿದ್ದಿದೆ. ಮನೆಯೊಳಗಿದ್ದ ರಾಮಪ್ಪ ಸೇರಿದಂತೆ ಅವರ ಪತ್ನಿ ನಾಗಮ್ಮ, ಗೀತಾ ಶಶಿಧರ್, ಶರತ್ ಇವರಿಗೆ ಗಾಯಗಳಾಗಿ ಸೊರಬದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ತೇಜಸ್‌ಕುಮಾರ್, ಸಿಬ್ಬಂದಿ, ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಡೆ ಹೋಬಳಿಯ ಕೋಟೆಕೊಪ್ಪ, ಹೊಸಳ್ಳಿ ನಡುವಿನ ರಸ್ತೆಯಲ್ಲಿ ಕೆರೆಯೊಂದರ ಏರಿ ಕುಸಿದ ಕಾರಣ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಾಡದಬೈಲು, ಕಡಸೂರು, ಜೋಳದಗುಡ್ಡೆ, ಗುಡವಿ, ಮೂಡದೀವಳಿಗೆ, ತಟ್ಟಿಕೆರೆ ಮುಂತಾದ ಗ್ರಾಮಗಳ ಜಮೀನು ವರದಾ ಪ್ರವಾಹಕ್ಕೆ ಸಿಲುಕಿವೆ.
ಶಾಸಕ ಮಧು ಬಂಗಾರಪ್ಪ ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದ್ದು, ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
ಮುಂದುವರಿದ ಜಡಿಮಳೆ
ಶಿವಮೊಗ್ಗ: ಮಲೆನಾಡಿನಲ್ಲಿ ಜಡಿಮಳೆ ಮುಂದುವರಿದಿದ್ದು, ಅಬ್ಬರ ಕಡಿಮೆಯಾಗಿದೆ. ತುಂಗಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದ್ದು, ಉಳಿದಂತೆ ಪರಿಸ್ಥಿತಿ ಸಾಮಾನ್ಯವಾಗಿದೆ.
ಸೋಮವಾರ ಮುಂಜಾನೆ ಅಂಕಿಅಂಶದಂತೆ 24 ಗಂಟೆಯಲ್ಲಿ ಆಗುಂಬೆಯಲ್ಲಿ 9 ಸೆ.ಮೀ., ಲಿಂಗನಮಕ್ಕಿ 7 ಸೆ.ಮೀ., ಹೊಸನಗರ 5, ತೀರ್ಥಹಳ್ಳಿ 4, ಸಾಗರ, ಅರಸಾಳು ಹಾಗೂ ಶಿರಾಳಕೊಪ್ಪ 3, ತ್ಯಾಗರ್ತಿ ಹಾಗೂ ಸೊರಬ 2, ಆನವಟ್ಟಿ, ಶಿಕಾರಿಪುರ ಹಾಗೂ ಭದ್ರಾವತಿಯಲ್ಲಿ ತಲಾ 1 ಸೆ.ಮೀ. ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯ 1,800 ಅಡಿ ತಲುಪಲು ಕೇವಲ ಒಂದು ಅಡಿ ಬಾಕಿ ಇದೆ. ಗರಿಷ್ಠ ಮಟ್ಟ 1,819 ಅಡಿ.