ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗೋರಕ್‌ಸಿಂಗ್ ವರದಿಗೆ ದ್ವಂದ್ವ ನಿಲುವು; ಆರೋಪ

Lingaraj Badiger
Updated On : 23 Jul 2013, 11:16 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.22
ಬಿಜೆಪಿಯು ಡಾ. ಗೋರಕ್‌ಸಿಂಗ್ ವರದಿ ಕುರಿತಂತೆ ಯಾವುದೇ ಸ್ಪಷ್ಟ ಅಭಿಪ್ರಾಯ ಹೊಂದದೆ ದ್ವಂದ್ವ ಹಾಗೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ತೀರ್ಥಹಳ್ಳಿ ತಾಲೂಕಿನ ಮಲೆನಾಡು ಅಡಕೆ ಬೆಳೆಗಾರರ ಸಂಘಟನೆ ಆರೋಪಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಘಟಕ ಡಾ. ಗೋರಕ್‌ಸಿಂಗ್ ವರದಿ ಜಾರಿಗೆ ಸರ್ಕಾರವನ್ನು ಒತ್ತಾಯಿಸುತ್ತಿದೆ. ಆದರೆ, ಶಿವಮೊಗ್ಗ ಬಿಜೆಪಿ ಘಟಕ ಈ ವರದಿಯನ್ನು ಅವೈಜ್ಞಾನಿಕ ಎಂದು ವಿರೋಧ ವ್ಯಕ್ತಪಡಿಸುತ್ತಿರುವುದು ಅಡಕೆ ಬೆಳೆಗಾರರ ಬಗ್ಗೆ ಹೊಂದಿರುವ ದ್ವಂದ್ವ ನೀತಿಯಾಗಿದೆ. ತಲತಲಾಂತರದಿಂದ ಸಾಂಪ್ರದಾಯಿಕವಾಗಿ ಅಡಕೆ ಕೃಷಿಯನ್ನು ಮಾಡುತ್ತಿರುವ ಮಲೆನಾಡಿಗರ ಬಗ್ಗೆ ಹೊಂದಿರುವ ವಿರೋಧಿ ಧೋರಣೆಯನ್ನು ಪಕ್ಷ ಬಹಿರಂಗಪಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಅಡಕೆ ಬೆಳೆಗಾರರ ಸಂಘಟನೆಗಳ, ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಇನ್ನಿತರ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಡಾ. ಗೋರಕ್‌ಸಿಂಗ್ ನೇತೃತ್ವದ ಸಮಿತಿಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಮಲೆನಾಡು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಅಡಕೆ ಬೆಳೆಗಾರರ ಸಂಕಷ್ಟಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸಮಿತಿ ರಚಿಸಲಾಗಿದೆ.
ಬಿಜೆಪಿ ತಿಳಿಯಲಿ: ಸಮಿತಿಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಳದಿ ಎಲೆ, ಕೊಳೆ ರೋಗ ಪೀಡಿತ ಅಡಕೆ ತೋಟಗಳಿಗೆ ಭೇಟಿಕೊಟ್ಟು, ಅಡಕೆ ಬೆಳೆಗಾರರ ಸಂಘಟನೆ ಮತ್ತು ಜನಪ್ರತಿನಿಧಿಗಳ ಜೂತೆಗೆ ಸಂವಾದ, ಸಮಾಲೋಚನೆ ನಡೆಸಿ ಈ ಭಾಗದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತದೆ. ಈ ಅಂಶವನ್ನು ಬಿಜೆಪಿ ಅರಿಯಬೇಕು ಎಂದು ಸಂಘಟನೆ ತಿಳಿಸಿದೆ.
ಡಿಸೆಂಬರ್ 2009ರಲ್ಲಿ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ನೀಡಿದೆ. ಆ ಸಂದರ್ಭದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರದಿಯ ಅನುಷ್ಠಾನಕ್ಕಾಗಿ ಯಾವುದೇ ಪ್ರಸ್ತಾಪವನ್ನು ಕೇಂದ್ರಕ್ಕೆ ಸಲ್ಲಿಸಿಲ್ಲ. ಅಲ್ಲದೇ ಸಂಸದ ಬಿ.ವೈ. ರಾಘವೇಂದ್ರ ಈ ಬಗ್ಗೆ ಇದುವರೆಗೆ ಸಂಸತ್ತಿನಲ್ಲಿ ಯಾವುದೇ ಪ್ರಸ್ತಾಪವನ್ನೂ ಸಹ ಮಾಡಿಲ್ಲ. ಇನ್ನೂ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಮೊದಲಿನಿಂದಲೂ ಡಾ. ಗೋರಕ್ ಸಿಂಗ್ ವರದಿಯ ಬಗ್ಗೆ ವಿರೋಧಿ ಧೋರಣೆಯನ್ನು ಹೊಂದಿದ್ದು, ಮ್ಯಾಮ್‌ಕೋಸ್ ಉಪಾಧ್ಯಕ್ಷ ನರಸಿಂಹ ನಾಯಕ್ ಬೀರೂರಿನಲ್ಲಿ ಡಾ. ಗೋರಕ್ ಸಿಂಗ್ ವರದಿಯ ಅಧ್ಯಯನಕ್ಕೆ ಪೂರಕ ಹಾಗೂ ಶೃಂಗೇರಿಯಲ್ಲಿ ಇದು ಮಲೆನಾಡಿಗೆ ಪೂರಕ ಎಂಬ ಗೊಂದಲಮಯವಾದ ಹೇಳಿಕೆಯನ್ನು ನೀಡಿರುತ್ತಾರೆ.
ಪ್ರಸ್ತಾವನೆ ಸಲ್ಲಿಸಲು ವಿಫಲ: ಈ ಮೂಲಕ ಬಿಜೆಪಿಯಲ್ಲಿ ಡಾ. ಗೋರಕ್‌ಸಿಂಗ್ ವರದಿಯ ಬಗ್ಗೆ ಸ್ಪಷ್ಟವಾದ ಅಭಿಪ್ರಾಯವನ್ನು ಹೊಂದದೆ ತನ್ನ ಆಡಳಿತವಾಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ 4 ಹೆಕ್ಟೇರ್‌ವರೆಗಿನ ಅಡಕೆ ಬೆಳೆಗಾರರ ಸಾಲದ ಮಾಹಿತಿಯನ್ನು ಒಳಗೊಂಡ ಸಮರ್ಪಕ ಪ್ರಸ್ತಾವನೆಯನ್ನು ಸಲ್ಲಿಸುವಲ್ಲಿ ವಿಫಲವಾಗಿದೆ ಎಂದು ಸಂಘಟನೆ ದೂರಿದೆ.
ಬಿಜೆಪಿ ನೇತೃತ್ವದ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಹಳದಿ ಎಲೆ, ಕೊಳೆ ರೋಗ ಹಾಗೂ ಮತ್ತಿತರ ರೋಗಗಳ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಅಡಕೆ ಬೆಳೆಗಾರರಿಗೆ ಸ್ಪಂದಿಸುವ ಸಲುವಾಗಿ ತಜ್ಞರ ಸಮಿತಿಯನ್ನು ರಚಿಸಲು ಅವಕಾಶವಿದ್ದರೂ ಯಾವುದೇ ಸಮಿತಿಯನ್ನು ರಚನೆ ಮಾಡದಿರುವುದು ವಿಪರ್ಯಾಸ. ಆದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಡಕೆ ಬೆಳೆಗಾರರ ಹಿತರಕ್ಷಣೆ ಬಗ್ಗೆ ಜಾರಿಗೊಳಿಸಿದ ಯೋಜನೆಗಳನ್ನು ಬಹಿರಂಗೊಳಿಸಬೇಕು ಎಂದು ಸಂಘಟನೆಯ ಸಂಚಾಲಕ ರವೀಶ್ ಬಾಳೆಹಳ್ಳಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement