ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಡಿತರ; ಗ್ರಾಹಕರಿಗೆ ತೊಂದರೆ

Lingaraj Badiger
Updated On : 23 Jul 2013, 11:07 am

ಶಿರಾಳಕೊಪ್ಪ: ರೇಷನ್ ಕಾರ್ಡ್ ರಿನಿವಲ್ ಕಾರ್ಯವನ್ನು ಆಹಾರ ಇಲಾಖೆ ನಿಲ್ಲಿಸಿದ ಕಾರಣ ಪ್ರತಿ ತಿಂಗಳು ರೇಷನ್ ಪಡೆಯುತ್ತಿದ್ದ ಪಡಿತರ ಚೀಟಿದಾರರಿಗೆ ಪಡಿತರ ನಿರಾಕರಿಸಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ನಡೆದಿದ್ದ ರಿನವಲ್ ಕಾರ್ಯ ಇಲಾಖೆ ನಿರ್ದೇಕರ ಆದೇಶದಂತೆ ನಿಲ್ಲಿಸಲಾಗಿದೆ ಎಂದು ಪಡಿತರ ಸೇವಾ ಕೇಂದ್ರ ದಿಂದ ತಿಳಿದಿದೆ. ಆದ್ದರಿಂದ ತಕ್ಷಣ ಆಹಾರ ಮತ್ತು ನಾಗರಿಕ ಇಲಾಖೆ ಆಯುಕ್ತರು ರೇಷನ್ ಕೊಡಲು ನಿರಾಕರಿಸದಂತೆ ನ್ಯಾಯಬೆಲೆ ಅಂಗಡಿಗಳಿಗೆ ಆದೇಶ ನೀಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.
27ಕ್ಕೆ  ಅದಾಲತ್
ಸಾಗರ: ಉಪವಿಭಾಗಾಧಿಕಾರಿ ಡಾ. ಬಿ. ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜು.27ರಂದು ತಾಲೂಕು ಆನಂದಪುರಂ ಹೋಬಳಿ ನಾಡಕಚೇರಿಯಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಗಳಾದ ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪಿಂಚಣಿ ಅದಾಲತ್ ಆಯೋಜಿಸಲಾಗಿದೆ.
ಈ ಕುರಿತು ಫಲಾನುಭವಿಗಳಾಗಲು ಅರ್ಹರಿರುವವರು, ಸಾರ್ವಜನಿಕರು ಸಭೆಗೆ ಹಾಜರಾಗಿ ತಮ್ಮ ಅಹವಾಲನ್ನು ಸಲ್ಲಿಸಿ, ಮಾಹಿತಿ ಪಡೆದುಕೊಳ್ಳಲು ಉಪವಿಭಾಗಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಐಟಿ ದಾಳಿ: ಖಂಡನೆ
ಶಿವಮೊಗ್ಗ: ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಮಠದ ವಿದ್ಯಾಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿರುವುದನ್ನು ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಖಂಡಿಸಿದೆ.
ಮಠವು ಯಾವುದೇ ಸರ್ಕಾರಗಳು ಮಾಡದ ಅಭಿವೃದ್ಧಿ ಮತ್ತು ಸತ್ಕಾರ್ಯಗಳನ್ನು ಮಾಡುತ್ತ ಸರ್ವ ಸಮುದಾಯದ ಗೌರವವನ್ನು ಪಡೆಯುತ್ತಿದೆ. ಬಡಮಕ್ಕಳಿಗೆ ಉತ್ತಮ ಶಿಕ್ಷಣ, ಅನ್ನದಾಸೋಹ, ಆರೋಗ್ಯವನ್ನು ನೀಡುತ್ತಾ, ಸಾರ್ವಜನಿಕರಿಗೆ ಆರೋಗ್ಯ ಹಾಗೂ ಇತರೆ ವಿವಿಧ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿವೆ.
ಎಷ್ಟೋ ಎಂಜನಿಯರ್, ಡಾಕ್ಟರ್, ರಾಜಕಾರಣಿಗಳು ಮತ್ತು ರೈತಬಾಂಧವರು ಶ್ರೀಮಠದಲ್ಲಿ ವಿದ್ಯಾರ್ಜನೆ ಪಡೆದಿದ್ದಾರೆ. ಹೀಗಿರುವಾಗ ಐಟಿ ದಾಳಿ ರಾಜಕೀಯ ಪಿತೂರಿ ಎಂದು ಸಂಘ ಆರೋಪಿಸಿದೆ.ಶ್ರೀಮಠ ಜನಪರ ಕಾರ್ಯಗಳನ್ನು ಮಾಡುತ್ತಾ ಹಲವು ಸೇವಾ ಯೋಜನೆಗಳನ್ನು ಜಾರಿಗೆ ತರುತ್ತಿತ್ತು. ಆದರೆ, ಐಟಿ ದಾಳಿಯಿಂದ ಮಠದ ಗೌರವ ಹಾಗೂ ಎಲ್ಲಾ ವರ್ಗದ ಜನರ ಗೌರವಕ್ಕೆ ಧಕ್ಕೆಯುಂಟು ಮಾಡಿದೆ. ಈ ದಾಳಿ ಕೇವಲ ಒಕ್ಕಲಿಗ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನಡೆಸಿರುವ ದಾಳಿಯಾಗಿದ್ದು, ರಾಜಕೀಯ ಪ್ರೇರಿತವಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎ. ಮಂಜಪ್ಪ ತಿಳಿಸಿದ್ದಾರೆ.

ಸರ್ಕಾರ ಜನರನ್ನು ಸೋಮಾರಿ ಮಾಡುತ್ತಿದೆ
ಚನ್ನಗಿರಿ: ಸರ್ಕಾರವು ದುಡಿಯುವ ಕೈಗಳಿಗೆ ಕೆಲಸವನ್ನು ಕೊಡದೆ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ಸೋಮವಾರ ಪಟ್ಟಣದ ಸಂತೆಮೈದಾನದ ಬಳಿ ಇರುವ ಶಾದಿ ಮಹಲ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚನ್ನಗಿರಿ ವಲಯದ 6 ಒಕ್ಕೂಟದ ಚನ್ನಗಿರಿ ಕಾರ್ಯ ಕ್ಷೇತ್ರದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ನೂತನ ಒಕ್ಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸರ್ಕಾರವು ಬಡವರ ಮತ್ತು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗವನ್ನು ಪಡೆಯಲು ಮಹಿಳೆಯರು ವಿದ್ಯಾವಂತರಾದಾಗ ಮಾತ್ರ ಸಾಧ್ಯ. ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಅಡಿಗೆ ಮನೆಗಳಿಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗಂಡಸರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಿರುವುದು ಪ್ರಗತಿಯ ಸಂಕೇತ ಎಂದರು. ಹಾಲಸ್ವಾಮಿ ವಿರಕ್ತ ಮಠದ ಶ್ರೀ ಜಯದೇವ ಮಹಾಸ್ವಾಮಿಗಳು ವಹಿಸಿ ಮಾತನಾಡುತ್ತಾ, ಮಹಿಳೆಯರು ಆಧ್ಯಾತ್ಮಿಕವಾದ ಚಿಂತನೆಗಳಿಂದ ಕೂಡಿದವರಾಗಿದ್ದು, ಇವರು ನಿರ್ವಹಿಸುವ ಎಲ್ಲಾ ಕ್ಷೇತ್ರಗಳು ಪ್ರಗತಿದಾಯಕವಾಗಿರುತ್ತವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement