ಮದುವೆಯಾಗುವುದಾಗಿ ವಂಚನೆ; ಬಂಧನಕ್ಕೆ ಆಗ್ರಹ
ಕ.ಪ್ರ.ವಾರ್ತೆ, ಸಾಗರ, ಜು.22
ತಾಲೂಕಿನ ಜಂಬೂರುಮನೆ ಗ್ರಾಮದ ದೊರೆಸ್ವಾಮಿ ಎಂಬ ಯುವಕ ಚನ್ನಶೆಟ್ಟಿಕೊಪ್ಪದ ದಲಿತ ಮಹಿಳೆ ಆಶಾ ಎಂಬುವವರಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸೋಮವಾರ ದಸಂಸ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ರೈತ ಸಂಘದ ವತಿಯಿಂದ ಡಿವೈಎಸ್‌ಪಿ ಕಚೇರಿಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡ ಪರಮೇಶ್ವರ ದೂಗೂರು, ರಾಜ್ಯದಲ್ಲಿ ಅಮಾಯಕ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಬೇರೆಬೇರೆ ಒತ್ತಡಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಚೆನ್ನಶೆಟ್ಟಿಕೊಪ್ಪದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ದೊರೆಸ್ವಾಮಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು, ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಮಾಂತರ ಠಾಣೆಯ ಪ್ರಭಾರ ವೃತ್ತ ನಿರೀಕ್ಷಕ ಓಂಕಾರ ನಾಯಕ್, ಈಗಾಗಲೇ ಆರೋಪಿ ಪತ್ತೆಗೆ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು. ಆರೋಪಿ ಮಾಡಿರುವ ತಪ್ಪಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡುವುದು ತಮ್ಮ ಕರ್ತವ್ಯವಾಗಿದೆ. ಇಲಾಖೆ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸುತ್ತಿದೆ. ನೊಂದ ಯುವತಿಗೆ ರಕ್ಷಣೆಯ ಜೊತೆಗೆ ಆರೋಪಿಯ ಬಂಧನಕ್ಕೆ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ನಾಗರಾಜ ಸ್ವಾಮಿ, ಪ್ರಗತಿಪರ ಸಂಘಟನೆಯ ಅತ್ರಿ, ಪುರುಷೋತ್ತಮ, ದ್ಯಾವಪ್ಪ ಕೆಳದಿ, ಆನಂದ ಬಿ., ರೈತ ಸಂಘದ ಟಿ.ವಿ. ಮಲ್ಲೇಶಪ್ಪ, ರವಿಕುಮಾರ್ ಹಾಜರಿದ್ದರು.