ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯುವಜನತೆ ಮನಸ್ಥಿತಿ ಬದಲಾಗಲಿ; ಸೆಂಥಿಲ್

Lingaraj Badiger
Updated On : 23 Jul 2013, 11:15 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.22
ಇಂದಿನ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್ ಆಗಬೇಕೆಂಬ ಮನೋಭಾವದಿಂದ ಬೇರೆ ಕ್ಷೇತ್ರಗಳಲ್ಲಿರುವ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿಷಾದಿಸಿದರು.
ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ, ಬೆಂಗಳೂರಿನ ಎಲ್ ಅಂಡ್, ಕಂಪನಿ ಮತ್ತು ಎಸ್‌ಎಂಎಸ್‌ಎಸ್ ಸಂಸ್ಥೆ ಸಹಯೋಗದಲ್ಲಿ ಸೋಮವಾರ ನಗರದ ಆಲ್ಕೋಳ ಸರ್ಕಲ್‌ನಲ್ಲಿರುವ ಚೈತನ್ಯ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ನಿರುದ್ಯೋಗಿ ಯುವಜನತೆಗಾಗಿ ಉದ್ಯೋಗ ಮೇಳದಲ್ಲಿ ಮಾತನಾಡಿದರು.
ಮಾಹಿತಿ ಪಡೆದುಕೊಳ್ಳಿ: ಇಂದಿನ ಯುವಪೀಳಿಗೆ ಉದ್ಯೋಗದ ವಿಚಾರದಲ್ಲಿ ಒಂದೇ ಕ್ಷೇತ್ರದ ಕಡೆ ಆಸಕ್ತಿ ತೋರುವುದರಿಂದ ಬೇರೆ ಕ್ಷೇತ್ರಗಳ ಉದ್ಯೋಗದ ಮಾಹಿತಿ ದೊರಕುವುದಿಲ್ಲ. ಇದರಿಂದ ಬಹಳಷ್ಟು ಮಂದಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಇದಕ್ಕೆ ಅವಕಾಶ ಮಾಡಿಕೊಡದೆ ಸದ್ಯ ಇರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಹಾಗೂ ಇಂತಹ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಯುವಪೀಳಿಗೆಯ ಮನಸ್ಥಿತಿ ಬದಲಾಗಬೇಕು. ಒಂದೇ ಕ್ಷೇತ್ರಕ್ಕೆ ಸೀಮಿತವಾಗಬಾರದು. ಡಾಕ್ಟರ್ ಮತ್ತು ಎಂಜಿನಿಯರ್ ಕ್ಷೇತ್ರಗಳಲ್ಲಿ ಮಾತ್ರ ಉತ್ತಮ ಭವಿಷ್ಯ ಇದೆ ಎಂಬ ಭಾವನೆಯನ್ನು ಮೊದಲು ತೊಡೆದು ಹಾಕಬೇಕು. ಇತರೆ ಕ್ಷೇತ್ರಗಳಲ್ಲಿ  ಸಾಕಷ್ಟು ಉದ್ಯೋಗಗಳು ಖಾಲಿ ಇದ್ದು, ಬ್ಯಾಂಕ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆ (ಕೆಎಎಸ್, ಐಎಎಸ್ ಸೇರಿದಂತೆ ಮತ್ತಿತರ ಪರೀಕ್ಷೆಗಳನ್ನು ತೆಗೆದುಕೊಂಡು ಯಶಸ್ವಿಯಾಗಬೇಕು ಎಂದರು.
ಚಿಂತನೆ ನಡೆಸಬೇಕಿದೆ: ಜಿಲ್ಲೆಯಲ್ಲಿ ಉದ್ಯಮಶೀಲತಾ ಶಿಬಿರಗಳು ಕಡಿಮೆಯಾಗುತ್ತಿರುವುದರಿಂದ, ಉದ್ಯೋಗಾಕಾಂಕ್ಷಿಗಳಲ್ಲಿ ಉದ್ಯೋಗದ ಮಾಹಿತಿಯ ಕೊರತೆ ಹೆಚ್ಚಾಗುತ್ತಿದ್ದು, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಜಿಲ್ಲೆ ಸದೃಢವಾಗಿದ್ದರೂ, ನೂತನ ತಂತ್ರಜ್ಞಾನ ಹಾಗೂ ಸಂಶೋಧನೆಗೆ ಸಂಬಂಧಿಸಿದ ಮಾಹಿತಿ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ನಡೆಯಬೇಕಿದೆ. ಸಂಘ, ಸಂಸ್ಥೆಗಳು ಈ ಕುರಿತು ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಸಂಕುಚಿತ ಮನೋಭಾವದಿಂದ ಹೊರಬಂದು, ಹೊಸ-ಹೊಸ ಸಾಧ್ಯತೆಗಳನ್ನು ಗುರುತಿಸಬೇಕು.
ಇಂದು ಕೌಶಲ್ಯದ ಕೊರತೆ, ಉದ್ಯೋಗಗಳ ಕೊರತೆ ಹೆಚ್ಚಾಗುತ್ತಿದೆ. ಸರ್ಕಾರ ಈ ಕೊರತೆಯನ್ನು ನೀಗಿಸಲು ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದು, ಇದನ್ನು ಬಳಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಎಸ್‌ಎಂಎಸ್‌ಎಸ್ ಸಂಸ್ಥೆಯ ನಿರ್ದೇಶಕ ವೀರೇಶ್ ವಿ. ಮೊರಾಸ್, ಜನಸಂಖ್ಯೆ ಇಂದು 121 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ 30ರ ವಯೋವಾನದವರು 70 ಕೋಟಿಯಷ್ಟಿದ್ದಾರೆ. ಅದರಲ್ಲಿ ದುಡಿಯುವ ಕೈಗಳು ಕೇವಲ 20-30 ಕೋಟಿ ಮಾತ್ರ. ಉಳದಿಂತೆ 45 ಕೋಟಿ ಯುವಜನತೆ ನಿರುದ್ಯೋಗಿಗಳಾಗಿದ್ದಾರೆ. ಇವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಬೇಕಿದೆ ಎಂದರು.
ಕೇವಲ ಸರ್ಕಾರಿ ಉದ್ಯೋಗ ಸಿಗಬೇಕು ಎಂಬ ಆಸೆಯಿಂದ ದೇಶದಲ್ಲಿ ಸಾಕಷ್ಟು ನಿರುದ್ಯೋಗಿಗಳು ಕಾಲಹರಣ ಮಾಡುತ್ತಿದ್ದಾರೆ. ಇಂತಹ ಮನಸ್ಥಿತಿ ಬಿಟ್ಟು ಖಾಸಗಿ ಕ್ಷೇತ್ರಗಳಲ್ಲಿಯೂ ಅವಕಾಶಗಳಿವೆ ಅದನ್ನು ಯುವಜನತೆ ಬಳಸಿಕೊಳ್ಳಬೇಕು ಎಂದ ಅವರು, ಕೆಲಸ ಇಲ್ಲದೆ ಕಾಲಹರಣ ಮಾಡುವ ಬದಲು ವೃತ್ತಿ ಕೌಶಲ್ಯ ಬೆಳೆಸಿಕೊಂಡು ಉತ್ತಮ ಭವಿಷ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಮಹಿಳೆಯರಿಗಾಗಿ ಪ್ರತ್ಯೇಕ ಉದ್ಯಮಶೀಲತಾ ಶಿಬಿರ ಆಯೋಜಿಸಲಾಗಿತ್ತು. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದಿಂದ ನೂರಾರು ಯುವಕ-ಯುವತಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಎಸ್‌ಎಂಎಸ್‌ಎಸ್ ಸಂಸ್ಥೆಯ ಉಪಾಧ್ಯಕ್ಷ ಅತೀ ಫೆಲಿಕ್ಸ್ ಜಿ. ನೊರೊನ್ಹಾ, ಎಲ್ ಅಂಡ್, ಕಂಪನಿಯ ಕೌಶಲ್ಯ ತರಬೇತಿ ವ್ಯವಸ್ಥಾಪಕ ನಾಗರಾಜ್ ಹಾಗೂ ಫಸ್ಕ್ರ್ ಟಯೆಟ್- ಇಂಡಿಯಾ ಸಂಸ್ಥೆಯ ಉಪನಿರ್ದೇಶಕ ಮಧುಕೇಶ್ವರ್ ಭಟ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement