ರಸ್ತೆ ದುರಸ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಮನವಿ
ಭದ್ರಾವತಿ: ಶಾಲೆಗೆ ಹೋಗುವ ರಸ್ತೆ ಮಳೆಯಿಂದ ಹಾಳಾಗಿದ್ದು ಅದನ್ನು ದುರಸ್ತಿ ಪಡಿಸಲು ನಗರಸಭೆಗೆ ಮತ್ತು ಸಂಬಂಧಿಸಿದ ನಗರಸಭಾ ಸದಸ್ಯರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲವೆಂದು ಪಟ್ಟಣದ ಕೇಶವಪುರ ಬಡಾವಣೆಯ ತರುಣ ಭಾರತಿ ಶಾಲೆಯ ಮಕ್ಕುಳು ಮಂಗಳವಾರ ನಗರಸಭೆಗೆ ಮುತ್ತಿಗೆ ಹಾಕಿ ಪೌರಾಯುಕ್ತ ಬಿ.ಡಿ.ಬಸವರಾಜಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಸ್ತೆಯಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ದಿನವೂ ಓಡಾಡುತ್ತಿದ್ದು ಅವರನ್ನು ಶಾಲೆಗೆ ಬಿಡಲು ಪೋಷಕರು ಸಹ ರಸ್ತೆಯಲ್ಲಿ ಓಡಾಡುತ್ತಿದ್ದು ಗುಂಡಿ- ಗೊಟರುಗಳು ಮತ್ತು ಕೆಸರಿನಿಂದಾಗಿ ಅನೇಕರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ತಾತ್ಕಾಲಿಕವಾಗಿಯಾದರೂ ಶಾಲೆಗೆ ಬಂದುಹೋಗಲು ಅನುಕೂಲವಾಗುವಂತೆ ರಸ್ತೆಯನ್ನು ಸರಿಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಪೌರಾಯುಕ್ತ ಬಸವರಾಜಪ್ಪ ಬುಧವಾರದಿಂದಲೇ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುವುದೆಂದು ವಿದ್ಯಾರ್ಥಿಗಳಿಗೆ ಆಶ್ವಾಸನೆ ನೀಡಿದರು.