ಶಿವಮೊಗ್ಗ: ಜಮೀನು ಸರ್ವೇಗೆಂದು ರೈತರಿಂದ 15 ಸಾವಿರ ಲಂಚ ಪಡೆಯುವ ವೇಳೆ ಸರ್ವೇ ಇಲಾಖೆಯ ಸೂಪರ್ ವೈಸರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಲ್ಲಿನ ವಿನೋಬ ನಗರ ಬಡಾವಣೆಯ ಕೆಂಚಪ್ಪ ಲೇ ಔಟ್ 1ನೇ ತಿರುವಿನಲ್ಲಿರುವ ಭದ್ರಾವತಿ ತಾಲೂಕು ಕಚೇರಿ ಸರ್ವೇ ಸೂಪರ್ ವೈಸರ್ ಮಲ್ಲಿಕಾರ್ಜುನಯ್ಯ ಲೋಕಾ ಬಲೆಗೆ ಬಿದ್ದವರು. ಭದ್ರಾವತಿ ತಾಲೂಕಿನ ಮತಿಗಟ್ಟ ಗ್ರಾಮದ ನಿವಾಸಿ ಬಸವರಾಜಪ್ಪ ಎಂಬ ರೈತನಿಂದ 15 ಸಾವಿರ ರುಪಾಯಿ ಪಡೆಯುವಾಗ ದಾಳಿ ನಡೆದಿದೆ. ರೈತ ಬಸವರಾಜಪ್ಪ ದರ್ಖಾಸ್ತು ಜಮೀನಿನಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದರು. ಈ ಜಮೀನನ್ನು ಈ ಹಿಂದೆ ಅಲ್ಲಿನ ತಹಸೀಲ್ದಾರ್ ಅವರಿಗೆ ಮಂಜೂರು ಮಾಡಿದ್ದರು. ನಂತರದ ಪ್ರಕ್ರಿಯೆಯಂತೆ ಮಂಜೂರಾದ ಜಮೀನನನ್ನು ಸರ್ವೇಯರ್ ಅವರು ಪೋಡಿ ಮಾಡಿ ಕ್ರಮಬದ್ಧಗೊಳಿಸಿಕೊಡಬೇಕಿತ್ತು. ಈ ಹಿನ್ನೆಲೆಯಲ್ಲಿ ಬಸವರಾಜಪ್ಪನವರು ಸರ್ವೇಯರ್ ಮಲ್ಲಿಕಾರ್ಜುನಯ್ಯನವರಿಗೆ ಜಮೀನು ಪೋಡಿ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಸಂಬಂಧಿಸಿದ ದಾಖಲೆಗಳನ್ನೂ ಸಹ ಸಲ್ಲಿಸಿದ್ದರು. ಪೋಡಿ ಮಾಡಿಕೊಡಲು 25 ಸಾವಿರ ಲಂಚ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದ ಸರ್ವೇಯರ್, ಮುಂಗಡವಾಗಿ 15 ಸಾವಿರ ನೀಡುವಂತೆ ಬಸವರಾಜಪ್ಪ ಸೂಚಿಸಿದ್ದರು. ಈ ಕುರಿತಂತೆ ಬಸವರಾಜಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.