ಶಾಸಕ ಮಧು ಬಂಗಾರಪ್ಪಗೆ ಸನ್ಮಾನ
ಕ.ಪ್ರ.ವಾರ್ತೆ, ಸೊರಬ, ಜು.24 ಇಲ್ಲಿನ ಎಲ್ಲ ಚುನಾವಣೆಗಳಲ್ಲಿ ನಿರ್ಣಾಯಕ ಮತಗಳು ಮಡಿವಾಳ ಸಮಾಜದ್ದಾಗಿರುತ್ತದೆ ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು. ಪಟ್ಟಣ ಸಮೀಪದ ಕರಡಿಗೆರೆಯಲ್ಲಿರುವ ಮಡಿವಾಳ ಸಮುದಾಯ ಭವನದಲ್ಲಿ ಮಡಿವಾಳ ಸಮಾಜದವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಾತಿಮತ ಹೊರಗಿರಿಸಿ ಅಭಿವೃದ್ಧಿಯೇ ಪ್ರಧಾನ ಗುರಿಯನ್ನಾಗಿರಿಸಿಕೊಂಡಿರುವ ನಾನು ಮತದಾರರ ಬೇಡಿಕೆ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಮೊದಲ 3 ವರ್ಷಗಳಲ್ಲಿ ತಾಲೂಕಿನ ಮೂಲ ಅವಶ್ಯಕತೆಗಳನ್ನು ಪಟ್ಟಿ ಮಾಡಿ ಹಂತಹಂತವಾಗಿ ಒದಗಿಸಿಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಾಗರ ತಾಳಗುಪ್ಪ ಸೇರಿದಂತೆ ಎಲ್ಲ ಬ್ಲಾಕ್ ಅಧ್ಯಕ್ಷರಿಗೂ ಮಡಿವಾಳ ಜನಾಂಗಕ್ಕೆ ರಾಜಕೀಯವಾಗಿ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗುವುದು ಎಂದರು. ಸಮಾಜದ ಗಣಪತಿ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ರಂಗನಾಥ್, ತಾಪಂ ಅಧ್ಯಕ್ಷ ಸದಾನಂದಗೌಡ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ರುದ್ರಗೌಡ, ಶ್ರೀಪಾದ ಹೆಗಡೆ ನಿಸರಾಣಿ, ಸಿದ್ದಪ್ಪ, ಮೂರ್ತಿ, ಚಂದ್ರಪ್ಪ, ಬಸವರಾಜ್ ಇದ್ದರು.
--
ಮುಕ್ತನಿಧಿ ಸೌಲಭ್ಯವಿತರಣೆ
ಜೋಗ್ ಫಾಲ್ಸ್: ಇಲ್ಲಿನ ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ವತಿಯಿಂದ ಶೇ.22.75 ಮತ್ತು 7.25 ಯೋಜನೆಯಡಿಯಲ್ಲಿ ಜೋಗ, ಕಾರ್ಗಲ್, ಲಿಂಗನಮಕ್ಕಿ, ಹೆನ್ನಿ ವ್ಯಾಪ್ತಿಯ 10 ಶಾಲೆಗಳಿಗೆ ಕಂಪ್ಯೂಟರ್, ನೋಟ್ ಬುಕ್, ಬ್ಯಾಗ್ಗಳನ್ನು ಜೋಗ- ಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಶೈಕ್ಷಣಿಕ ಉತ್ತೇಜನಕ್ಕೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಉತ್ತಮವಾಗಿ ಶೈಕ್ಷಣಿಕ ಪ್ರಗತಿ ಹೊಂದಬೇಕೆಂಬುದೇ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.