ಅತಿವೃಷ್ಟಿ: ಪರಿಹಾರದ ಮೊತ್ತ ಹೆಚ್ಚಿಸಿ: ರಾಘವೇಂದ್ರ
ಕ.ಪ್ರ.ವಾರ್ತೆ,ಶಿಕಾರಿಪುರ,ಜು.25
ಅತಿವೃಷ್ಟಿಯಿಂದಾಗಿ ಹಾನಿಗೀಡಾದ ಪ್ರದೇಶಕ್ಕೆ ತುರ್ತು ಪರಿಹಾರವಾಗಿ ಜಿಲ್ಲಾಧಿಕಾರಿಗಳು ರು. 10 ಲಕ್ಷ ಬಿಡುಗಡೆಗೊಳಿಸಿದ್ದು, ಈ ಅತ್ಯಲ್ಪ ಹಣದಿಂದ ಪರಿಹಾರ ಕಾರ್ಯ ಅಸಾಧ್ಯವಾಗಿದ್ದು,ಪರಿಹಾರದ ಮೊತ್ತ ಹೆಚ್ಚಳಗೊಳಿಸಿ ಕೂಡಲೇ ಬಿಡುಗಡೆಗೊಳಿಸುವಂತೆ ಸಂಸದ ರಾಘವೇಂದ್ರ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಗುರುವಾರ ತಾಲೂಕಿನ ಗುಡ್ಡದ ತುಮ್ಮಿನಕಟ್ಟೆ, ಕಟ್ಟಿಗೆಹಳ್ಳ ಮೊದಲಾದ ಕಡೆ ಅತಿವೃಷ್ಟಿಯಿಂದಾಗಿ ಹಾನಿಗೀಡಾದ ಸ್ಥಳ ವೀಕ್ಷಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ರು. 1.5 ಕೋಟಿ ನೆರವು: ಕಳೆದ 20ರಂದು ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಯಡಿಯೂರಪ್ಪನವರು ಅತಿವೃಷ್ಟಿ ಸಂದರ್ಭದಲ್ಲಿ ಸಂಭವಿಸಬಹುದಾದ ದುರಂತದ ಬಗ್ಗೆ ಪೂರ್ವಭಾವಿ ಸಭೆಯನ್ನು ತಾಲೂಕು ಆಡಳಿತದ ಜತೆ ನಡೆಸಿದ್ದು, ಈ ಸಂದರ್ಭದಲ್ಲಿ ತಾಲೂಕಿಗೆ ನೆರೆ ಪರಿಹಾರಕ್ಕಾಗಿ ರು. 1.5 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದಾಗಿ ತಿಳಿಸಿದರು.
ಇದೀಗ ಅತಿ ವೃಷ್ಟಿಯಿಂದಾಗಿ ತಾಲೂಕಿನ ವಿವಿಧ ಗ್ರಾಮದಲ್ಲಿ ಹೆಚ್ಚಿನ ರೀತಿ ಹಾನಿಯುಂಟಾಗಿದ್ದು, ರು. 10 ಲಕ್ಷ ಪರಿಹಾರ ತುರ್ತು ಕಾರ್ಯಕ್ಕೆ ಅಸಾಧ್ಯವಾಗಿದೆ ಎಂದ ಅವರು, ಈ ಕೂಡಲೇ ಜಿಲ್ಲೆಯ ಎಲ್ಲಾ ತಾಲೂಕಿಗೆ ಪರಿಹಾರ ಕಾರ್ಯಕ್ಕಾಗಿ ಹೆಚ್ಚಿನ ಹಣ ಬಿಡುಗಡೆಗೆ ಒತ್ತಾಯಿಸಿದರು.
ಪರ್ಯಾಯ ವ್ಯವಸ್ಥೆ: ಗುಡ್ಡದ ತುಮ್ಮಿನಕಟ್ಟೆ ಗ್ರಾಮದ ತೀರ್ಥಹಾಳು ಕೆರೆ ಭರ್ತಿಯಾಗಿ ಕೋಡಿ ಮೇಲಿನ ನೀರು ಕೆಳಭಾಗದ ಚಂದ್ರಪ್ಪ ಹಾಗೂ ಪರಮೇಶ್ವರಪ್ಪರವರ ಮನೆಯೊಳಗೆ ಹರಿಯುವ ಮೂಲಕ ದ್ವೀಪದಂತಾಗಿರುವುದನ್ನು ವೀಕ್ಷಿಸಿದ ಸಂಸದ ರಾಘವೇಂದ್ರ ಕೂಡಲೇ ಮನೆಯ ಮುಂಭಾಗದಲ್ಲಿನ ನಾಲೆಯ ಸಣ್ಣ ಸಿಮೆಂಟಿನ ಪೈಪ್ ಬದಲಾಯಿಸಿ ದೊಡ್ಡದನ್ನು ಅಳವಡಿಸಿ ನೀರು ಸರಾಗವಾಗಿ ಹರಿಯಲು ಪರ್ಯಾಯ ವ್ಯವಸ್ಥೆ ಮಾಡಲು ಸ್ಥಳದಲ್ಲಿದ್ದ ಭಾರೀ ನೀರಾವರಿ ಇಲಾಖೆಯ ಎಇಇ ವೈ.ಬಿ ನಾರಾಯಣರವರಿಗೆ ಸೂಚಿಸಿದರು.
ತಹಸೀಲ್ದಾರ್ ಪ್ರಕಾಶ್ ಗಣಾಚಾರಿ, ಉಪ ತಹಸೀಲ್ದಾರ್ ಆನಂದ ಗರಡಿ, ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಚಂದ್ರಶೇಖರ್, ಗ್ರಾಮ ಲೆಕ್ಕಿಗ ರಮೇಶ್, ತಾಪಂ ಅಧ್ಯಕ್ಷ ಹನುಮಂತಪ್ಪ, ಮುಖಂಡ ಸುಕೇಂದ್ರಪ್ಪ, ಅಂಬಾರಗೊಪ್ಪ ಶೇಖರಪ್ಪ, ಮಲ್ಲೇಶಪ್ಪ, ರುದ್ರಪ್ಪಯ್ಯ, ಚನ್ನವೀರಪ್ಪ ಇದ್ದರು.