ನಕ್ಸಲ್ ಸಮಸ್ಯೆಯತ್ತ ಗಮನ
ಕ.ಪ್ರ.ವಾರ್ತೆ, ಹೊಸನಗರ, ಜು.25
ತಾಲೂಕಿನ ನಕ್ಸಲ್ ಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿರುವ ಮಾಣಿ ಜಲಾಶಯ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಹಸೀಲ್ದಾರ್ ಎಂ.ಎಸ್. ಅರ್ಚನಾ ಹೇಳಿದರು.
ತಾಲೂಕಿನ ಸುಳುಗೋಡು ಗ್ರಾಪಂ ವ್ಯಾಪ್ತಿಯ ಕುಂಬ್ರಿಬೈಲಿನ ನೀರುತೊಟ್ಟಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಕೂಲ್ಬ್ಯಾಗ್ ಸೇರಿದಂತೆ ಶೈಕ್ಷಣಿಕ ಸಾಮಗ್ರಿ ವಿತರಿಸಿದರು.
ಈ ಗ್ರಾಮಗಳಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡಲಿದೆ ಎಂದು ಗ್ರಾಮದ ದಿಕ್ಕನ್ನೇ ಬದಲಿಸುವ ಶಕ್ತಿ ಪತ್ರಿಕೆಗಳಿಗಿವೆ. ವರದಿಯಲ್ಲಿ ವಾಸ್ತವತೆಗೆ ಪ್ರಾಮುಖ್ಯತೆ ಇರಲಿ ಎಂದು ಆಶೀಸಿದರು. ನಗರ ಕೇಂದ್ರವನ್ನು ಹೊರತು ಪಡಿಸಿ ಕುಗ್ರಾಮದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಿದ ಬಗ್ಗೆ ಪತ್ರಕರ್ತರ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅನುಮಾನ ಬೇಡ: ನಕ್ಸಲ್ಪೀಡಿತ ಗ್ರಾಮಗಳ ಜನರ ಬದುಕಿನ ಬಗ್ಗೆ ವಾಸ್ತವ ವರದಿಯನ್ನು ಬಿಚ್ಚಿಡುವ ಪತ್ರಕರ್ತರು ನಕ್ಸಲ್ ಬಗ್ಗೆ ಅನುಕಂಪ ಹೊಂದಿದ್ದಾರೆ ಎಂದು ಅನುಮಾನಿಸಿ ಕೆಲವರ್ಷಗಳ ಹಿಂದೆ ಪೊಲೀಸ್ ಮತ್ತು ಪತ್ರಕರ್ತರ ನಡುವೆ ಸಂಘರ್ಷದ ವಾತಾವರಣವನ್ನೇ ಸೃಷ್ಟಿ ಮಾಡಿತ್ತು. ಆದರೀಗ ವಾಸ್ತವಾಂಶ ಅರಿವಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜೇಸುದಾಸ್ ಹೇಳಿದರು.
ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ರವಿ ಬಿದನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಪಂ ಅಧ್ಯಕ್ಷೆ ನಾಗರತ್ನ ದೇವರಾಜ್, ನಾಗರಾಜ್ ನೇರಿಗೆ, ಸಿಪಿಐ ಗಣಪತಿ ಗುಡಾಜೆ, ಸಂದೀಪ್, ಮಂಜುನಾಥ್, ವಿನುತಾ ಜಗದೀಶ್, ಚಂದ್ರಶೇಖರ್, ರತ್ನಾಕರಗೌಡ, ಸುರೇಶ್, ಕೆಂಚಪ್ಪ ಅರಸಾಳು ರಂಗನಾಥ್, ಹರೀಶ್ ಉಪಸ್ಥಿತರಿದ್ದರು.