ಬಹುಮಾನಗಳ ಸುರಿಮಳೆ
ಜೋಗ್ಫಾಲ್ಸ್: ಏಷ್ಯಾ ಖಂಡದ ಅತಿ ಕಡಿಮೆ ವೆಚ್ಚದ ವಿದ್ಯುದಾಗಾರ (ಕೇವಲ 22.46 ಪೈಸೆಗಳ ದರದಲ್ಲಿ) ಎಂಬ ಹೆಗ್ಗಳಿಕೆ ಹೊಂದಿದ ಶರಾವತಿ ವಿದ್ಯುದಾಗಾರಕ್ಕೆ ಅತ್ಯುತ್ತಮ ನಿರ್ವಹಣೆ ಮತ್ತು ಉತ್ತಮ ಕಾರ್ಯಕ್ಷಮತೆಗಾಗಿ ಈ ಬಾರಿ ನಿಗಮದ ಕೇಂದ್ರ ಕಚೇರಿಯಿಂದ 2012-13ನೇ ಸಾಲಿನ ಪ್ರಶಸ್ತಿ ಲಭಿಸಿದೆ.
ಪ್ರತಿ ವರ್ಷ ಉತ್ತಮ ನಿರ್ವಹಣೆ ಮತ್ತು ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡುವ ವಿದ್ಯುದಾಗಾರಗಳಿಗೆ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಈ ಬಾರಿ ಶರಾವತಿ ಪ್ರಥಮ ಪ್ರಶಸ್ತಿ ನೀಡಿದೆ.
100 ಮೆಗಾವ್ಯಾಟ್ಗಿಂತಲೂ ಅಧಿಕವಿರುವ ವಿದ್ಯುದಾಗಾರಗಳ ಪೈಕಿಯ ಪ್ರಥಮ ಬಹುಮಾನ ಗೇರುಸೊಪ್ಪ ವಿದ್ಯುದಾಗಾರಕ್ಕೆ ಲಭಿಸಿದ್ದು, 100 ಮೆಗಾವ್ಯಾಟ್ ಒಳಗಿರುವ ಪ್ರಶಸ್ತಿಯ ಶ್ರೇಣಿಯ ಬಹುಮಾನವನ್ನು ಲಿಂಗನಮಕ್ಕಿ ವಿದ್ಯುದಾಗಾರ ತನ್ನದಾಗಿಸಿಕೊಂಡಿದೆ.
ನಿಷ್ಠಾವಂತ ಸೇವೆ: ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ನಿಗಮದ ಕೇಂದ್ರ ಕಚೇರಿಯಿಂದ ಪ್ರಶಸ್ತಿ ಲಭಿಸಿರುವುದು ಎಲ್ಲಾ ಕಾರ್ಮಿಕರ, ಉದ್ಯೋಗಿಗಳ, ಅಧಿಕಾರಿಗಳ ಪರಿಶ್ರಮದ ಫಲವಾಗಿದ್ದು, ಈ ಹೆಗ್ಗಳಿಕೆಗೆ ಪ್ರತಿಯೊಬ್ಬರ ನಿಷ್ಠಾವಂತ ಸೇವೆಯೇ ಕಾರಣ ಎಂದು ತಿಳಿಸಿದರು.
ಕಾರ್ಯನಿರ್ವಾಹಕ ಅಭಿಯಂತರ ಸಿ. ಗಿರೀಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಸ್. ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.