ಮೆಕ್ಕೆಜೋಳಕ್ಕೆ ಕಾಂಡಕೊರಕ ಬಾಧೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.25
ತಾಲೂಕಿನ ಅಬ್ಬಲಗೆರೆ, ಕುಂಚೇನಹಳ್ಳಿ, ಆಲದಹಳ್ಳಿ, ಸೋಮಿನಕೊಪ್ಪ, ಹರಮಘಟ್ಟ ಹಾಗೂ ಸುತ್ತಮುತ್ತಲಿನ ಮೆಕ್ಕೆಜೋಳದ ತಾಕುಗಳಲ್ಲಿ ಕಾಂಡಕೊರಕದ ಬಾಧೆ ಕಾಣಿಸಿಕೊಂಡಿದ್ದು, ಇದರ ನಿರ್ವಹಣೆಗಾಗಿ ರೈತರು ಕೆಲವು ಕ್ರಮಗಳನ್ನು ಅನುಸರಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.
ಕಾಂಡಕೊರಕ ಹುಳುವಿನ ಬಾಧೆಯಿಂದ ಎಲೆಗಳ ಮೇಲೆ ಅಲ್ಲಲ್ಲಿ ಸರದಿಯಾಕಾರದ ರಂಧ್ರಗಳು ಕಂಡುಬರಲಿವೆ. ಕಾಂಡದಲ್ಲಿ ಕೊರೆದ ರಂಧ್ರಗಳನ್ನು ಸೀಳಿ ನೋಡಿದಾಗ ಬಿಳಿ ಮಿಶ್ರಿತ ಕಂದುಬಣ್ಣದ ಕಾಂಡಕೊರಕದ ಮರಿಹುಳುಗಳು ಗೋಚರಿಸಲಿವೆ. ಇದರಿಂದಾಗಿ ಮೆಕ್ಕೆಜೋಳದ ಬೆಳವಣಿಗೆಯಲ್ಲಿ ಕುಂಠಿತವಾಗಲಿದೆ.
ಕಾಂಡಕೊರಕ ಹುಳುವಿನ ಬಾಧೆ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 2ಮಿಲಿ ಕ್ಲೋರೋಪೈರಿಫಾಸ್, ಕ್ವಿನಾಲ್ಫಾಸ್, ಮೊನೊಕ್ರೊಟೋಫಾಸ್ ಕೀಟನಾಶಕ ಬೆರೆಸಿ ಸಿಂಪರಣೆ ಮಾಡಬೇಕು. (ಎಕರೆಗೆ 250-300ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.
ಅಂದರೆ 500ಮಿಲಿ ಕೀಟನಾಶಕವನ್ನು 250ಲೀಟರ್ ನೀರಿನಲ್ಲಿ ಬೆರೆಸುವುದು) ಅಥವಾ ಎಕರೆಗೆ 8 ಕೆಜಿ ಕಾರ್ಬೊಫ್ಯೂರಾನ್ ಹರಳನ್ನು ಮೆಕ್ಕೆಜೋಳದ ಸುಳಿಭಾಗಕ್ಕೆ ಹಾಕುವಂತೆ ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.