ಶಿಕ್ಷಣ ವ್ಯಾಪಾರೀಕರಣ: ವಿಷಾದ
ಕ.ಪ್ರ.ವಾರ್ತೆ, ಶಿಕಾರಿಪುರ, ಜು.25
ಇತ್ತೀಚಿನ ದಿನದಲ್ಲಿ ವಾಣಿಜ್ಯ ನಗರದಲ್ಲಿನ ಶಿಕ್ಷಣ ಸಂಸ್ಥೆಯ ಆರಂಭ ಕೇವಲ ಲಾಭದಾಯಕ ಉದ್ದಿಮೆ ರೀತಿಯಲ್ಲಿ ಮಾರ್ಪಾಟಾಗಿದೆ ಎಂದು ಸಂಸದ ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿನ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸತತ ಅಭ್ಯಾಸ: ವಿದ್ಯಾರ್ಥಿಗಳು ಕನಸು ಕಾಣಬೇಕು. ಕನಸು ನನಸಾಗುವ ದಿಸೆಯಲ್ಲಿ ಶ್ರಮವಹಿಸಿ ಸತತ ಅಬ್ಯಾಸಿಸಬೇಕು ಎಂದ ಅವರು, ವಿದ್ಯಾರ್ಥಿ ಸಂಘ ಶಕ್ತಿ ಹಾಗೂ ಕ್ರಿಯಾಶೀಲತೆಯ ಸಂಕೇತವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಈ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಸಲಹೆ ನೀಡಿದರು.
ವಾಣಿಜ್ಯ ನಗರದಲ್ಲಿನ ಶಿಕ್ಷಣ ಸಂಸ್ಥೆಯ ಆರಂಭ ಇತ್ತೀಚಿನ ವರ್ಷದಲ್ಲಿ ಲಾಭದಾಯಕ ಉದ್ದಿಮೆಯಾಗಿ ಪರಿವರ್ತನೆಯಾಗಿದ್ದು, ಉತ್ತಮ ವಿದ್ಯಾಭ್ಯಾಸಕ್ಕಾಗಿ ಪೋಷಕರು ನಗರ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸ್ಥಳೀಯ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ಜತೆಗೆ ಎಲ್ಲಾ ರೀತಿಯ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಅತೀ ಕಡಿಮೆ ಖರ್ಚಿನಲ್ಲಿ ನೀಡುತ್ತಿದೆ ಎಂದರು.
ನಿರ್ದಿಷ್ಟ ಗುರಿ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ನಾಗರಾಜ್, ಪ್ರತಿ ವಿದ್ಯಾರ್ಥಿ ನಿರ್ದಿಷ್ಟ ಗುರಿ ಹೊಂದಿರಬೇಕು. ಗುರಿಯ ಜತೆಗೆ ಉತ್ತಮ ಗುರುವಿನ ಮಾರ್ಗದರ್ಶನದಿಂದ ಮಾತ್ರ ಸಾಧನೆ ಸಾಧ್ಯ ಎಂದರು.
ಶಿಕ್ಷಣ ಪ್ರತಿಯೊಬ್ಬರಿಗೂ ನಿಧಿಯಾಗಿದ್ದು, ಸೂಕ್ತ ರೀತಿ ಸದುಪಯೋಗಪಡಿಸಿಕೊಂಡಾಗ ಮಾತ್ರ ಜೀವನ ಪೂರ್ತಿ ಸಾಧಿಸಲು ಸಾಧ್ಯ ಎಂದರು. ವಿದ್ಯಾರ್ಥಿ ಸಂಘಗಳು ಪ್ರಜಾಪ್ರಭುತ್ವದ ಮಾದರಿಯಲ್ಲಿದ್ದು, ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಸದಸ್ಯರನ್ನು ಆಯ್ಕೆ ಮಾಡುವಂತೆ ತಿಳಿಸಿದರು.
ಮುಖ್ಯ ಅತಿಥಿ ಕುವೆಂಪು ವಿ.ವಿ. ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಪ್ರೊ. ಬೋಜಾನಾಯ್ಕ ಮಾತನಾಡಿ, ವಿದ್ಯೆ ಕೇವಲ ನಿರ್ದಿಷ್ಟ ವ್ಯಕ್ತಿಯ ಸ್ವತ್ತಲ್ಲ. ಎಲ್ಲಾ ವರ್ಗದ ಜನತೆಯನ್ನು ತಲುಪುವಂತಹದ್ದು ಎಂದ ಅವರು ಸನ್ಮಾನ ಕಾರ್ಯಕ್ರಮಗಳು ಇನ್ನಿತರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿರಬೇಕು ಎಂದು ಹೇಳಿದರು.
ಹೆಮ್ಮೆಯ ಪ್ರತೀಕ: ಜಾಗತೀಕರಣ ಹಾಗೂ ಉದಾರೀಕರಣದ ಹಿನ್ನಲೆಯಲ್ಲಿ ಗುಡ್ಡಗಾಡು ಪ್ರದೇಶಗಳು ನಗರಕ್ಕೆ ಸಮೀಪವಾಗುತ್ತಿದೆ ಎಂದ ಅವರು ಗ್ರಾಮೀಣ ಪ್ರದೇಶದ ಇಂತಹ ಶಿಕ್ಷಣ ಸಂಸ್ಥೆಗಳು ಹೆಮ್ಮೆಯ ಪ್ರತೀಕವಾಗಿದೆ ಎಂದರು.
ಶಿಕ್ಷಣ ಸಂಸ್ಥೆ ನಿರ್ದೇಶಕ ಎಂ.ಬಿ. ಶಿವಕುಮಾರ್, ತೇಜಸ್ವಿನಿ ರಾಘವೇಂದ್ರ ಮುಖ್ಯ ಆಡಳಿತಾಧಿಕಾರಿ ಕೆ.ಎಸ್ ಎನ್. ಭಟ್ ಮೊದಲಾದವರು ಇದ್ದರು. ದಯಾನಂದ ಸ್ವಾಗತಿಸಿದರು. ಆತ್ಮ ಹಾಗೂ ಸುಹಾನ ನಿರೂಪಿಸಿದರು. ಸಿಂಚನ ವಂದಿಸಿದರು.