ಕಳಸವಳ್ಳಿ ಸೇತುವೆಯೇ ಸೂಕ್ತ
ಕ.ಪ್ರ.ವಾರ್ತೆ ಶಿವಮೊಗ್ಗ ಜು. 26
ಅಂಬಾರಗೊಡ್ಲು-ಕಳಸವಳ್ಳಿ ಸೇತುವೆ ಕಾಮಗಾರಿ ಆರಂಭಕ್ಕೆ ಲೋಕೋಪಯೋಗಿ ಸಚಿವ ಮಹದೇವ ಪ್ರಸಾದ್ ಅವರು ತಕ್ಷಣಕ್ಕೆ 20 ಕೋಟಿ ರು. ಹಣ ಮಂಜೂರು ಮಾಡುವುದಾಗಿ ಸದನದಲ್ಲಿ ಭರವಸೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನ ಸೆಳೆಯುವ ಗೊತ್ತುವಳಿಗೆ ಸ್ಥಳೀಯ ಶಾಸಕರೂ ಆದ ಸ್ಪೀಕರ್ ಕಾಗೋಡು ತಿಮ್ಮಪ್ಪ ಬೆಂಬಲಿಸಿದ್ದಾರೆ. ಅಲ್ಲದೇ, ಪೂರ್ವನಿಯೋಜಿತ ಸ್ಥಳದಲ್ಲಿ ಸೇತುವೆ ಆಗಲಿ ಎಂದು ಈ ಹಿಂದೆಯೂ ಹಲವು ಭಾರಿ ಹೇಳಿದ್ದಾರೆ. ಹಾಗಾಗಿ ಈ ವಿಷಯ ಚರ್ಚೆ ಅಗತ್ಯ ಇಲ್ಲ ಎಂದು ಸೇತುವೆ ಹೋರಾಟ ಸಮಿತಿ ಹೇಳಿದೆ.
ಸಮಿತಿ ಸ್ಪಷ್ಟನೆ: ಕಳಸವಳ್ಳಿ-ಅಂಬಾರಗೊಡ್ಲು ಸೇತುವೆ ಬದಲು ಹರದೂರು-ಅಂಬಾರಗೊಡ್ಲು ಸೇತುವೆ ನಿರ್ಮಿಸುವುದು ಮಿತವ್ಯಯಕಾರಿ ಎಂಬ ಚರ್ಚೆ ಉದ್ಭವವಾಗಿರುವ ಹಿನ್ನೆಲೆಯಲ್ಲಿ ಸಮಿತಿಯ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ನಾಡಿಗೆ ಬೆಳಕು ನೀಡಲು ಆಸ್ತಿ, ಬದುಕು ಕಳೆದುಕೊಂಡು ತ್ಯಾಗ ಮಾಡಿರುವ ಸಾಗರ ತಾಲೂಕಿನ ತುಮರಿ-ಬ್ಯಾಕೋಡು ಪ್ರದೇಶದ ಜನರು ಕಳೆದ 5 ದಶಕದಿಂದ ಕೇಳುತ್ತಿರುವುದು ಒಂದೇ ಒಂದು ವಿಷಯವನ್ನು. ಒಂದು ಸೇತುವೆ ನಿರ್ಮಿಸಿ, ಸಾಗರ ಪಟ್ಟಣದೊಂದಿಗೆ ಸುಲಭ ಸಂಪರ್ಕ ಕಲ್ಪಿಸಿ ಎಂದು ಈಗಾಗಲೇ ಸೇತುವೆ ಯೋಜನೆ ಹಲವು ಹಂತಗಳನ್ನು ದಾಟಿ ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಅನುಮೋದನೆ ಪಡೆದಿದೆ. 41 ಪಿಲ್ಲರ್ ನಿರ್ಮಾಣವಾಗಬೇಕಿದ್ದು, ಮಣ್ಣು ಪರೀಕ್ಷೆಯೂ ಆಗಿದೆ. ಅಲ್ಲದೇ ಜನರಿಗೆ ಇದೇ ಸೇತುವೆ ಅನುಕೂಲಕರ ಎಂದು ಸಮಿತಿ ಕಾರ್ಯದರ್ಶಿ ಪ್ರಸನ್ನ ಕೆರೆಕೈ ಹೇಳಿದ್ದಾರೆ.
ಡೀನೋಟಿಪೈ ಕಷ್ಟ: ಹಾಗೆ ನೋಡಿದರೆ ಹಿನ್ನೀರು ಪ್ರದೇಶದಲ್ಲಿ ಸೇತುವೆ ನಿರ್ಮಿಸಬಹುದಾದ 20ಕ್ಕೂ ಹೆಚ್ಚು ಸ್ಥಳಗಳು ಸಿಗುತ್ತವೆ. ಮುಪ್ಪಾನೆ ಬಳಿ 200 ಮೀ. ಉದ್ದದ ಸೇತುವೆ ಮಾಡಿದರೆ ಸಾಕು. ಹೊಳೆಬಾಗಿಲು ಬಳಿಯೂ ಅವಕಾಶವಿದೆ. ಇವೆಲ್ಲಾ ಸ್ಥಳದಲ್ಲಿ ರಸ್ತೆ ಸಮಸ್ಯೆ ಇದೆ.
ಕೆಪಿಸಿಯಿಂದ, ಅರಣ್ಯ ಇಲಾಖೆಯಿಂದ ಭೂಸ್ವಾದೀನ ಮಾಡಬೇಕಾಗುತ್ತದೆ. ಈಗಾಗಲೇ ಒಮ್ಮೆ ನೋಟಿಫೈ ಆದ ಜಾಗ ಡೀನೋಟಿಪೈ ಮಾಡುವುದು ಅತ್ಯಂತ ಕಷ್ಟದ ಕೆಲಸ. ಆದರೆ ಈಗಾಗಲೇ ರಸ್ತೆ ಸಂಪರ್ಕ ಇರುವ, ಮತ್ತೆ ಭೂಸ್ವಾದೀನದ ಅವಶ್ಯಕತೆ ಇಲ್ಲದ ಜಾಗ ಎಂದರೆ ಅದು ಅಂಬಾರಗೋಡ್ಲು-ಕಳಸವಳ್ಳಿ ಭಾಗ ಮಾತ್ರ ಎಂದು ಅವರು ಹೇಳಿದ್ದಾರೆ.
ಈ ಸೇತುವೆ ಸರಿಯಾಗಿ ಮಧ್ಯಭಾಗದಲ್ಲಿ ಸಾಗುತ್ತದೆ. ಸಿಗಂದೂರಿಗೆ ದೇಶವಿದೇಶದಿಂದ ಬರುವ ಭಕ್ತರಿಗೂ ಅನುಕೂಲ. ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶವಿದೆ. ಕೊಲ್ಲೂರಿಗೆ ಸುಲಭ ಸಂಪರ್ಕ ಸಾಧ್ಯ.
ಈ ಸೇತುವೆ ಒಳಗೊಂಡಂತೆ ತಡಸ- ಶಿಕಾರಿಪುರ- ಸೊರಬ- ಸಾಗರ- ಬೈಂದೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ಘೋಷಣೆ ಅವಕಾಶವೂ ಇದೆ. ಹಾವೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕ ಸಾಧ್ಯ. ಸಾಗರ-ಬೈಂದೂರು ನಡುವಿನ ದೂರ 160 ಕಿ.ಮೀ.ನಿಂದ 70 ಕಿ.ಮೀ.ಗೆ ಕಡಿಮೆಯಾಗುತ್ತದೆ.
ವಿಳಂಬ ಬೇಡ: ಈ ಎಲ್ಲಾ ದೃಷ್ಟಿಯಿಂದ ಅನುಕೂಲವಾಗಿರುವ ಸೇತುವೆ ಇದು. ಸ್ಪೀಕರ್ ಕಾಗೋಡು ತಿಮ್ಮಪ್ಪರಿಗೂ ಈ ಎಲ್ಲಾ ವಿಷಯ ಗೊತ್ತು ಎನ್ನುತ್ತಾರೆ ಸೇತುವೆ ಹೋರಾಟ ಸಮಿತಿ ಉಪಾಧ್ಯಕ್ಷ ಲೋಕ್ಪಾಲ್ ಜೈನ್.
ಇದರಲ್ಲಿ 50 ವರ್ಷ ಕಷ್ಟ ಅನುಭವಿಸಿದ್ದೇವೆ. ಯಾರಿಗೂ ತೊಂದರೆ ಆಗಬಾರದು. ಅನಗತ್ಯ ವಿಳಂಬ ಆಗಬಾರದು. ಎಲ್ಲರಿಗೂ ಅನುಕೂಲ ಆಗಬೇಕು. ಈ ದಿಕ್ಕಿನಲ್ಲಿ ಚಿಂತಿಸಿದರೆ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ನಿರ್ಮಾಣ ಅತ್ಯಂತ ಅವಶ್ಯ ಎಂದು ಜೈನ್ ಹೇಳುತ್ತಾರೆ.