ಮಡಿದ ಯೋಧರ ಸ್ಮರಣೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು. 26 ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಜಿಲ್ಲಾ ಬಿಜೆಪಿ ಶುಕ್ರವಾರ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರನ್ನು ಸ್ಮರಿಸುವ ಜೊತೆಗೆ ನಗರದಲ್ಲಿರುವ ಮಾಜಿ ಸೈನಿಕರನ್ನು ಆತ್ಮೀಯವಾಗಿ ಗೌರವಿಸಿತು. ಇಲ್ಲಿನ ಶಿವಪ್ಪನಾಯಕ ವೃತ್ತದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ವೀರ ಯೋಧರಿಗೆ ಬಿಜೆಪಿ ಮುಖಂಡರು ನುಡಿ ನಮನ ಸಲ್ಲಿಸಿದರು.
ಸನ್ಮಾನ: ನಗರದಲ್ಲಿರುವ ನಿವೃತ್ತ ಸೈನಿಕರಾದ ಸ್ಟಾಲಿನ್ ಲೋಬೋ, ರೂಪ್ ಕುಮಾರ್, ನೇಮೋಜಿ ರಾವ್, ನಾಗರಾಜು ನಾಯ್ಡು ಅವರನ್ನು ಸನ್ಮಾನಿಸಲಾಯಿತು.
ನಂತರ ಮಾತನಾಡಿದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ದೇಶ ಪ್ರೇಮದ ಕೊರತೆ ಇರುವ ಪ್ರಧಾನಿ ಡಾ. ಮನಮೋಹನ್ ಸಿಂಗ್. ಚೀನಾವು ಭಾರತದ ಪ್ರದೇಶಗಳನ್ನು ನಿಧಾನವಾಗಿ ಅಕ್ರಮಿಸಿಕೊಳ್ಳುತ್ತಿದ್ದರೂ, ಯಾವುದೇ ನಿರ್ಣಯ ಕೈಗೊಳ್ಳದೆ ಕೇಂದ್ರ ಸರ್ಕಾರ ತಟಸ್ಥವಾಗಿದೆ. ಈಗಾಗಲೇ ಚೀನಾ ನಮ್ಮ ದೇಶದ ಗಡಿಭಾಗದ 18 ಕಿ.ಮೀ ಪ್ರದೇಶದ ಒಳಗೆ ಕಾಲಿಟ್ಟಿದೆ. ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಹಿತಿ ಇದ್ದರೂ ಸುಮ್ಮನಿರುವುದು ವಿಪರ್ಯಾಸ. ಇಂತಹ ನಾಯಕರಿಂದ ದೇಶದ ರಕ್ಷಣೆ ಸಾಧ್ಯವಿಲ್ಲ ಎಂದು ಟೀಕಿಸಿದರು.
ವಿಶ್ವದ ಗಮನ: ಕಾರ್ಗಿಲ್ ಯುದ್ಧ ನಡೆಯುವಾಗ ವಾಜಪೇಯಿ ವಿಶ್ವದ ಎಲ್ಲಾ ರಾಷ್ಟ್ರದ ಗಮನ ಸೆಳೆದು ಪಾಕ್ ಸೇನೆ ವಾಪಸ್ಸು ಹೋಗುವಂತೆ ಸೂಚಿಸದಿದ್ದರೆ ಕಾರ್ಗಿಲ್ ಕೈ ಬಿಟ್ಟು ಹೋಗುತ್ತಿತ್ತು. ಒಂದು ವೇಳೆ ಕಾರ್ಗಿಲ್ ಬಿಟ್ಟುಕೊಟ್ಟಿದ್ದರೆ, ದೇಶ ಅಶಕ್ತ ರಾಷ್ಟ್ರವಾಗುತ್ತಿತ್ತು. ಲಡಾಕ್ಗೆ ಹೋಗುವ ಮಾರ್ಗವನ್ನು ಕಳೆದುಕೊಳ್ಳಬೇಕಾಗುತ್ತಿತ್ತು ಎಂದರು.
ವೀರಪರಂಪರೆ ಇರುವ ಭಾರತವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಭಯೋತ್ಫಾದನೆಯ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ದೇಶ ಭಾರತ. ಹಗಲು- ರಾತ್ರಿ ದೇಶದ ಗಡಿ ಭಾಗವನ್ನು ಸೈನಿಕರು ಕಾಯುತ್ತಿರುವುದರಿಂದ ನಾವು ಸುಖವಾಗಿದ್ದೇವೆ ಎಂದರು.
ಇಂದು ಇಡೀ ದೇಶ ಶತ್ರುಗಳ ಹಿಡಿತದಲ್ಲಿದೆ. ಪಾಕಿಸ್ಥಾನದ ಭಯೋತ್ಪಾದಕರು ರಾಜ್ಯದ ಬೆಂಗಳೂರಿಗೆ ಬರುತ್ತಾನೆಂದರೆ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಲೇಬೇಕು. ಮುದೊಂದು ದಿನ ಶಿವಮೊಗ್ಗಕ್ಕೂ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ ಮಂಜುನಾಥ್, ಪ್ರಸ್ತುತ ಯುವಕರು ದೇಶದ ರಕ್ಷಣೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ದೇಶಕ್ಕಾಗಿ ಒಬ್ಬ ಮಗ. ಮನೆಗಾಗಿ ಒಬ್ಬ ಮಗ ಎಂಬ ಕಾಲಬರಬೇಕು. ದೇಶಕ್ಕಾಗಿ ಬಲಿದಾನ ನೀಡುವ ಕಾಲ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ಸ್ದಸ್ಯ ಭಾನುಪ್ರಕಾಶ್, ಸೂಡಾ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ದತ್ತಾತ್ರಿ, ನಗರಸಭೆ ಮಾಜಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಮತ್ತಿತರರು ಇದ್ದರು.