ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಲೋಕಾಯುಕ್ತ ದಾಳಿ

Lingaraj Badiger
Updated On : 27 Jul 2013, 10:57 am

ಶಿವಮೊಗ್ಗ: ಕೆಎಚ್‌ಪಿ ಬಳ್ಳಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಎಂಜಿನಿಯರ್ ಹಾಲೇಶಪ್ಪನವರ ಶಿವಮೊಗ್ಗ ನಿವಾಸದ ಮೇಲೆ ಶುಕ್ರವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಲ್ಲಿನ ವಿನೋಬನಗರದ ಲಕ್ಷ್ಮೀಪುರ ಬಡಾವಣೆಯಲ್ಲಿರುವ ಐಷಾರಾಮಿ ಬಂಗಲೆ ಮೇಲೆ ಮುಂಜಾನೆ 5.30ರ ಸುಮಾರಿಗೆ ಆರಂಭವಾದ ದಾಳಿ ಮಧ್ಯಾಹ್ನದ ವರೆಗೂ ಮುಂದುವರಿದೇ ಇತ್ತು.
ಬಂಗಲೆ ಹಾಗೂ ಮನೆಯೊಳಗಿನ ಐಷಾರಾಮಿ ವಸ್ತುಗಳನ್ನು ಕಂಡು ಲೋಕಾ ಪೊಲೀಸರೇ ಒಂದಷ್ಟುಹೊತ್ತು ಅವಕ್ಕಾಗಿ ಹೋದರು ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್ಪಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಸಮೀವುಲ್ಲಾ, ಪುರುಷೋತ್ತಮ ಮತ್ತವರ ಸಿಬ್ಬಂದಿ ಪಾಪೇಗೌಡ, ರಮೇಶ್ ಮಹಾಂತೇಶ್, ಸಂಜೀವ್, ಸುರೇಶ್ ಕಾರ್ಯಾಚರಣೆಯಲ್ಲಿದ್ದರು.
ಪ್ರಾಥಮಿಕ ತನಿಖೆಯಂತೆ ಮನೆಯಲ್ಲಿರುವ ವಸ್ತುಗಳ ಅಂದಾಜು ಮೌಲ್ಯ ಒಂದು ಕೋಟಿ ರುಪಾಯಿಗೂ ಹೆಚ್ಚೆಂದು ಅಂದಾಜಿಸಲಾಗಿದೆ.
ಮನೆಯಲ್ಲಿ 50 ಸಾವಿರ ನಗದು, 120 ಗ್ರಾಂ ಬಂಗಾರ, ಒಂದೂವರೆ ಕೆಜಿಯಷ್ಟು ಬೆಳ್ಳಿ ಸಾಮಗ್ರಿ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ. ಇದಕ್ಕಿಂತ ಮುಖ್ಯವಾಗಿ ಶಿವಮೊಗ್ಗ ನಗರ ಸೇರಿದಂತೆ ಬೇರೆ ಬೇರೆ ಕಡೆ ಇರುವ ಚರಾಸ್ತಿಗಳ ಕುರಿತಾದ ದಾಖಲೆ ಪತ್ರಗಳನ್ನು ಲೋಕಾ ಪೊಲೀಸರಿಗೆ ಲಭ್ಯವಾಗಿವೆ.
ಈ ಹಿಂದೆ ಶಿವಮೊಗ್ಗದಲ್ಲಿ ಕೆಎಚ್‌ಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ನಕಲಿ ಅಂಕಪಟ್ಟಿ ನೀಡಿ ಬಡ್ತಿ ಪಡೆದಿದ್ದರೆಂಬ ಆರೋಪಕ್ಕೆ ಒಳಗಾಗಿದ್ದು, ಸೇವೆಯಿಂದ ಅಮಾನತುಗೊಂಡಿದ್ದರು. ಇದೀಗ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement