'ಜ್ಞಾನ ಮಾತೃಬಾಷೆಯಲ್ಲೇ ದೊರೆತರೆ ಪರಿಣಾಮಕಾರಿ'
ಸಾಗರ: ಇಲ್ಲಿನ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಭಾನುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಕನ್ನಡ ವಿಕಿಪಿಡಿಯಾ ಕುರಿತಾದ ಮಾಹಿತಿ ಕಾರ್ಯಾಗಾರವನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸ್ಕೃತ ಜಗತ್ತಿನ ಮೂಲ ಭಾಷೆಯಾದರೂ ಈ ಭಾಷೆಯಲ್ಲಿ ಜಗತ್ತಿನಾದ್ಯಂತ ಜ್ಞಾನ ಪ್ರಸಾರ ಆಗಲಿಲ್ಲ. ಹಿಂದೆ ರಾಜ, ಮಹಾರಾಜರು ಈ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಜಗತ್ತಿನ ಜ್ಞಾನ ವಿಸ್ತಾರವಾಗುತ್ತಿದೆ. ಈ ಜ್ಞಾನ ನಮ್ಮ ನಮ್ಮ ಭಾಷೆಯಲ್ಲಿ ದೊರಕುವಂತಾದರೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.
ಜ್ಞಾನ ಎಲ್ಲರ ಸೊತ್ತು: ಸಾಹಿತಿ ಡಾ.ನಾ.ಡಿಸೋಜ, ಮನುಷ್ಯನಿಗೆ ಲಾಗಾಯ್ತಿನಿಂದಲೂ ಮಾಹಿತಿಯನ್ನು ಕಲೆ ಹಾಕುವ ಪ್ರವೃತ್ತಿ ಇತ್ತು. ಅದನ್ನೇ ಜ್ಞಾನ ಎಂದು ಕರೆಯಲಾಗುತ್ತಿದೆ. ಈ ಜ್ಞಾನಕ್ಕೆ ಹಿಂದೆ ಜಾತಿ, ಧರ್ಮ, ಭಾಷೆ, ಬಡವ, ಶ್ರೀಮಂತ ಎನ್ನುವ ಬಂಧನಗಳಿತ್ತು. ಆದರೆ ವಿದ್ಯುನ್ಮಾನ ಮಾಧ್ಯಮ ಬಂದ ಮೇಲೆ ಜ್ಞಾನ ಎಲ್ಲರ ಸೊತ್ತಾಗುತ್ತಿದೆ. ಕಂಪ್ಯೂಟರ್ ಬಂದ ಮೇಲೆ ಇದು ತಂತ್ರಜ್ಞಾನವಾಗಿ ಬದಲಾಗಿದೆ ಎಂದು ಹೇಳಿದರು.
ಕನ್ನಡ ವಿಕಿಪಿಡಿಯಾ ಸಂಪಾದಕ ಡಾ.ಪವನಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟನೆಯ ಅಧ್ಯಕ್ಷ ಜಿ.ಟಿ.ಶರ್ಮ ಅಧ್ಯಕ್ಷತೆ ವಹಿಸಿದ್ದರು. ವಿ.ಟಿ.ಸ್ವಾಮಿ, ಬಿ.ವಿ.ರಂವೀದ್ರನಾಥ್, ವೀಣಾ ಬೆಳೆಯೂರು ಹಾಜರಿದ್ದರು.