ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನಧಿಕೃತ ಸ್ಕ್ಯಾನಿಂಗ್ ಸೆಂಟರ್: ದಾಳಿಗೆ ಸಿದ್ಧತೆ

Rashmi Kasaragodu
Updated On : 30 Jul 2013, 11:10 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.29
ಕಾನೂನು ಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿಮಾಡಿ ಕಾನೂನು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಲಿಂಗಪತ್ತೆ ಕುರಿತಂತೆ ರಚಿಸಲಾಗಿರುವ ಪಿ.ಸಿ., ಅಂಡ್ ಪಿಎನ್‌ಡಿಪಿ ಸಲಹಾ ಸಮಿತಿ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಲಾಯಿತು.
78 ಕೇಂದ್ರ: ಪ್ರಸ್ತುತ ಜಿಲ್ಲೆಯಲ್ಲಿ 78 ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್‌ಗಳು ಇರುವುದಾಗಿ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಿವಣ್ಣರೆಡ್ಡಿ, ಕಾನೂನು ಪ್ರಕಾರ ಲಿಂಗಪತ್ತೆ ಮಾಡಲು ರೇಡಿಯಾಲಾಜಿಸ್ಟ್ ಫೆಜಿಷಿಯನ್ ಹಾಗೂ ಸ್ತ್ರೀರೋಗ ತಜ್ಞರಿಗೆ ಮಾತ್ರ ಅವಕಾಶವಿರುತ್ತದೆ. ಅದರಲ್ಲೂ, ಪ್ರತಿ ರೇಡಿಯಾಲಾಜಿಸ್ಟ್‌ಗೆ 2 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅವಕಾಶವಿರುತ್ತದೆ.
ಆದರೆ ಜಿಲ್ಲೆಯಲ್ಲಿ ಬಹುತೇಕರು ಕಾನೂನು ಉಲ್ಲಂಘಿಸಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಲಿಂಗಪತ್ತೆ ಮಾಡುತ್ತಿರುವ ಬಗ್ಗೆ ಮಾಹಿತಿ ಇರುವುದರಿಂದ ಇದನ್ನು ತಡೆಗಟ್ಟಲು ದಿಢೀರ್ ದಾಳಿ ಮಾಡುವುದೇ ಸೂಕ್ತ ಮಾರ್ಗವಾಗಿದೆ. ಈ ಮೂಲಕ ಇಂತಹ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.
ನಿಯಂತ್ರಣ ಅಗತ್ಯ: ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ನಿಯಮಾನುಸಾರ ಆರೋಗ್ಯಕರ ಸ್ಕ್ಯಾನಿಂಗ್ ನಡೆಯುತ್ತದೆ. ಆದರೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಣ್ಣ- ಪುಟ್ಟ ಕ್ಲಿನಿಕ್‌ಗಳಲ್ಲೂ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಸುತ್ತಿರುವುದು ಕಾನೂನು ಬಾಹಿರವಾಗಿದ್ದು, ಇಂತಹ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ನಿಯಂತ್ರಣಕ್ಕೆ ತರುವುದು ಅಗತ್ಯವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಲಿಂಗಪತ್ತೆ ಕಾನೂನು ಬಾಹಿರ ಎಂಬ ಬಗ್ಗೆ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕಿದೆ. ಅದಕ್ಕಾಗಿ ಜಿಲ್ಲಾದ್ಯಂತ ತಾಲೂಕು ಮಟ್ಟಗಳಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಾಗೃತಿ ಮೂಡಿಸಬೇಕು ಎಂದು ತೀರ್ಮಾನಿಸಲಾಯಿತು.
ಆಗಸ್ಟ್ ತಿಂಗಳ ಅಂತ್ಯದೊಳಗೆ ಪಿಸಿ, ಅಂಡ್ ಪಿಎನ್‌ಡಿಟಿ ಕಾಯ್ದೆಯ 12ನೇ ತಿದ್ದುಪಡಿ ಕುರಿತಂತೆ ಕುಲಂಕುಷ ಅಧ್ಯಯನದ ನಂತರ ಮುಂದಿನ ಸಮಿತಿಯ ಕಾರ್ಯ ಯೋಜನೆ ಸಿದ್ಧಪಡಿಸಿ, ಜಿಲ್ಲೆಯಲ್ಲಿ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ನಿರ್ಧರಿಸಲಾಯಿತು.
ಸಲಹಾ ಸಮಿತಿಯಲ್ಲಿ ಒಟ್ಟು 8 ಸದಸ್ಯರಿದ್ದು, ಸಿಟಿ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಮಲ್ಲೇಶ್ ಹುಲ್ಮನಿ, ಸ್ತ್ರೀರೋಗ ತಜ್ಞರಾದ ಡಾ. ಹೇಮಾ ಮೋಹನ್, ಶಿವಮೊಗ್ಗ ಡಯಾಗ್ನಸ್ಟಿಕ್ ಸೆಂಟರ್‌ನ ಡಾ.ಅರುಣ್ ಎಂ.ಎಸ್., ವಾತ್ಸಲ್ಯ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಧನಂಜಯ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜ್ ಜಿ., ಜಿಪಂ ಸದಸ್ಯ ಕಲಗೋಡು ರತ್ನಾಕರ್, ರೋಟರಿ ಉತ್ತರ ಸಂಸ್ಥೆಯ ವಿನಯಾ ಆರ್. ರಾಯ್ಕರ್ ಸಭೆಯಲ್ಲಿ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement